Events in Bangalore

by | Jul 15, 2022

ಮಂಕುತಿಮ್ಮನ ಅನನ್ಯ ಜೀವನದರ್ಶನ ಒಂದು ದೃಶ್ಯ ಕಾವ್ಯ

 – ವೈ.ಕೆ.ಸಂಧ್ಯಾ ಶರ್ಮ, ಕನ್ನಡ ಲೇಖಕಿ-ವಿಮರ್ಶಕಿ

ಕನ್ನಡದ ಭಗವದ್ಗೀತೆ ಎಂದು ಹೆಸರಾದ ಡಿ.ವಿ.ಜಿ. ಅವರ ‘ಮಂಕುತಿಮ್ಮನ ಕಗ್ಗ’ -ಸಾರ್ವಕಾಲಿಕ ಪ್ರಸ್ತುತೆಯನ್ನು ಪಡೆದ ಕಾಂತಾ ಸಂಹಿತೆಯ ಸರಳ-ಸುಭಗ 945 ಪದ್ಯಗಳ ಗುಚ್ಛ. ಇದರಲ್ಲಿ ಜೀವನಮೌಲ್ಯದ ಬ್ರಹ್ಮಾಂಡವೇ ಅಡಗಿದೆ. ಪ್ರತಿದಿನದ ಬದುಕಿನ ಎಲ್ಲ ಆಯಾಮಗಳ ಜೀವನದರ್ಶನ-ಚಿಂತನೆಗಳಿಗೆ ಕೈದೀವಿಗೆಯಾದ ಕಗ್ಗ ಅಂದು-ಇಂದು-ಎಂದೂ ಅನ್ವಯವಾಗುವ ವೈಶಿಷ್ಟ್ಯ ಪಡೆದಿದೆ.

ಇತ್ತೀಚಿಗೆ ಡಿವಿಜಿ ಅವರ 135 ನೇ ಜನ್ಮದಿನದಂದು ‘ಮಂಕುತಿಮ್ಮನ ಕಗ್ಗ’ ದ ಆಯ್ದ ಪದ್ಯಗಳನ್ನಾಯ್ದು ಭರತನಾಟ್ಯದ ‘ಮಾರ್ಗ’ ಪದ್ಧತಿಗೆ ಅಳವಡಿಸಿ ನೃತ್ಯವನ್ನು ಪ್ರಸ್ತುತಪಡಿಸುವ ಹೊಸಪ್ರಯೋಗವೊಂದು ಸಾಕಾರಗೊಂಡಿತು.  ಬೆಂಗಳೂರಿನ ಖ್ಯಾತ ನೃತ್ಯಕಲಾವಿದೆಯರಾದ ಸ್ನೇಹಾ ಕಪ್ಪಣ್ಣ ಮತ್ತು ಪದ್ಮಿನಿ ಅಚ್ಚಿ, ಕಗ್ಗವನ್ನು ಹೊಸ ಎರಕಕ್ಕೆರೆದು, ವಿಶಿಷ್ಟ ಪರಿಕಲ್ಪನೆಗೆ ರೂಪುಗೊಟ್ಟು ಜೆ.ಎಸ್.ಎಸ್. ರಂಗಮಂದಿರದಲ್ಲಿ ಯಶಸ್ವೀ ಪ್ರದರ್ಶನ ನೀಡಿ ತುಂಬಿದ ಗೃಹದ ಪ್ರೇಕ್ಷಕರಿಂದ ತುಂಬು ಮೆಚ್ಚುಗೆ ಗಳಿಸಿದರು. ಕಗ್ಗದ ಸಾರಸರ್ವಸ್ವ,  ನೃತ್ಯ-ನಾಟಕೀಯ ದೃಶ್ಯಗಳ ಅನಾವರಣ-ಅಭಿವ್ಯಕ್ತಿಯ ಮೂಲಕ ನೋಡುಗರ ಮೇಲೆ ಪರಿಣಾಮ ಬೀರಿತು.

ಸಾಮಾಜಿಕ ಮಗ್ಗುಲಿನ ಕಗ್ಗವನ್ನು, ನೃತ್ಯದ ಒಂದು ನಿರ್ದಿಷ್ಟ ಪದ್ಧತಿಗೆ ಅಳವಡಿಸಲು ಸಾಧ್ಯವೇ ಎಂಬ ಕಲ್ಪನೆಯೇ ಬೆರಗು ಹುಟ್ಟಿಸುವಂಥದು. ಅದೂ ಪುಷ್ಪಾಂಜಲಿ-ಶಬ್ದ, ವರ್ಣ, ದೇವರನಾಮ ಮತ್ತು ತಿಲ್ಲಾನ-ಮಂಗಳದ ವಿನ್ಯಾಸಕ್ಕೆ ಸರಿ ಹೊಂದಿಸಿ, ಮನಮುಟ್ಟುವ ರೀತಿಯಲ್ಲಿ ನೃತ್ಯ ಸಂಯೋಜನೆ ಮಾಡಿ ವರ್ಣರಂಜಿತವಾಗಿ ಪ್ರದರ್ಶಿಸಿ ಯಶಸ್ವಿಯಾದದ್ದು ಇಬ್ಬರು ಕಲಾವಿದೆಯರ ಸಾಹಸಕ್ಕೆ-ಪ್ರಯೋಗಶೀಲತೆಗೆ ಹಿಡಿದ  ಕನ್ನಡಿ. ಈ ಪ್ರಸ್ತುತಿಯಲ್ಲಿ ಯಾವುದೇ ಪೌರಾಣಿಕ ಸಂಚಾರಿ ಕಥನಗಳಿಲ್ಲದೆ ಸಾಮಾಜಿಕ ಆಯಾಮದ ವಿವಿಧ ಸಮಸ್ಯೆ, ವಿಚಾರಗಳ ಮೇಲೆ ಕ್ಷಕಿರಣ ಬೀರಿ ಅವುಗಳನ್ನು ‘ಮಾರ್ಗ’ಡ ಚೌಕಟ್ಟಿಗೆ ಅಳವಡಿಸಿಕೊಂಡಿದ್ದು  ಗಮನಾರ್ಹವಾಗಿತ್ತು.

ಸುಮಾರು ಎರಡು ಗಂಟೆಗಳ ಕಾಲ ನೋಡುಗರನ್ನು ಹಿಡಿದಿಟ್ಟುಕೊಂಡ ಈ ದೃಶ್ಯಕಾವ್ಯ, ಆರಂಭದಿಂದ ಅಂತ್ಯದವರೆಗೆ ಸಂದರ್ಭಕ್ಕೆ ಸರಿಯಾಗಿ ಹೊಂದುವಂತೆ ಕಗ್ಗದ ಪದ್ಯಗಳನ್ನು ವಿಶಿಷ್ಟ ನೃತ್ಯ ಸಂಯೋಜನೆ, ದೃಶ್ಯಗಳ ಸಂಚಾರಿ ಕಥಾನಕಗಳಲ್ಲಿ ನಾಟಕೀಯವಾಗಿ ಅನಾವರಣಗೊಳಿಸಲು ಸಾಧ್ಯವಾದದ್ದು ಪರಿಣತ ಕಲಾವಿದೆಯರ ಅಭಿನಯದ  ತಾಕತ್ತು. ಪ್ರತಿ ಪದ್ಯಗಳ ಆಂತರ್ಯ ಕಣ್ಣಿಗೆ ಕಟ್ಟುವಂತೆ ಇಬ್ಬರೂ ಪೂರಕವಾಗಿ ಸಾಕ್ಷಾತ್ಕರಿಸಿದರು.

‘ಪುಷ್ಪಾಂಜಲಿ’- ಶುಭಾರಂಭದ ನೃತ್ಯ ನಮನ-ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ, ಸಂಗೀತಗಾರರಿಗೆ, ಪ್ರೇಕ್ಷಕರಿಗೆ ಕೃತಜ್ಞತಾಪೂರ್ವಕ ವಂದನೆಯ ಸಲ್ಲಿಕೆ-ಪ್ರಥಮ ನೃತ್ತಾರ್ಪಣೆ. ವೇದಿಕೆಯ ಮೇಲೆ ನಿರ್ಮಿಸಲಾದ ‘ಮಂಕುತಿಮ್ಮನ ಕಗ್ಗ’ದ ಬೃಹತ್ ಹೊತ್ತಿಗೆಯ ಪುಟವನ್ನು ತೆರೆದು ಡಿವಿಜಿ ಅವರ ಪ್ರತಿಮೆಗೆ ನಮನ ನೈವೇದ್ಯ ಅರ್ಪಿಸಿದ್ದು ಅನನ್ಯವಾಗಿತ್ತು.

‘ಮಾರ್ಗ’ದ ಅನುಕ್ರಮದಲ್ಲಿ ಸಾಗಿ ಬರುವ ‘ಶಬ್ದಂ’-( ಕಾಂಬೋಧಿ ರಾಗ) ಸಣ್ಣ ಸಣ್ಣ ಜತಿಗಳಿಂದಾವೃತ ಪ್ರಸ್ತುತಿಯಲ್ಲಿ ಮೊದಲ ಬಾರಿಗೆ ‘ಅಭಿನಯ’ ಕಾಣಿಸಿಕೊಳ್ಳುವ ಪರಿಪಾಠ. ಬದುಕಿನಲ್ಲಿ ಸಮತೋಲನದಿಂದ ಸಾಧಿಸಬೇಕಾದ ವಿವಿಧ ಉಪಾಯಗಳ ಜೀವನಯೋಗವನ್ನು ಸಾದರಪಡಿಸುವ ಆಶಯದ ಪದ್ಯವನ್ನು ಕಲಾವಿದೆಯರು, ದೊಂಬರಾಟದ ಹಲವು ಚಮತ್ಕಾರಗಳು, ತಲೆಯ ಮೇಲೆ ಕೊಡ ಹೊತ್ತು  ತಂತಿಯ ಮೇಲೆ ನಿಯಂತ್ರಿತ ನಡಿಗೆಯ ನಿಭಾವಣೆಯ ದೃಶ್ಯಗಳನ್ನು ಸಮರ್ಥವಾಗಿ ಅಭಿನಯಿಸಿ ತೋರಿದರು. ಇಂದಿನ ಯುವಜನಾಂಗದ ಹತಾಶೆಯ ಸ್ಥಿತಿ, ಆತ್ಮಹತ್ಯೆಯ ಮನೋಭಾವ, ಪೋಷಕರ ಮಹತ್ವಾಕಾಂಕ್ಷೆ ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ಅಮೂಲ್ಯ ಜೀವನವನ್ನು ಕೊನೆಗಾಣಿಸಿಕೊಳ್ಳಬಾರದಂತೆ ಆತ್ಮವಿಶ್ವಾಸ- ಜೀವನಪ್ರೀತಿ ಹೊಮ್ಮಿಸುವ ಕಗ್ಗದ ಅರ್ಥಪೂರ್ಣ ದನಿಗೆ ಅಭಿನಯವಾದರು ಕಲಾವಿದೆದ್ವಯರು.

ಅನಂತರ- ‘ವರ್ಣ’- ಭರತನಾಟ್ಯದ ಪ್ರಮುಖ ಘಟ್ಟ. ನೃತ್ತಾಭಿನಯ ಸಮಾನ ಪ್ರಾಶಸ್ತ್ಯ ಪಡೆವ ಪ್ರಸ್ತುತಿ. ವರ್ಣದ ಲಕ್ಷಣಗಳನ್ನು ಸಮಗ್ರವಾಗಿ ಅಡಕಗೊಳಿಸಿಕೊಂಡಿದ್ದ ಈ ಕೃತಿಯಲ್ಲಿ ಸಂಕೀರ್ಣ ಜತಿಗಳು, ನೃತ್ತ-ಚಾರಿ ಭ್ರಮರಿಗಳು, ಹಸ್ತವಿನಿಯೋಗ ವೈವಿಧ್ಯ ಮುಂತಾದ ನೃತ್ಯ ವ್ಯಾಕರಣದ ಸೊಗಡಿನೊಳಗೆ ಹೊರಹೊಮ್ಮಿದ ಅರ್ಥವ್ಯಾಪ್ತಿ ಅಗಾಧವಾಗಿತ್ತು, ಅಭಿನಯದ ಹರವು ಹೃದಯಸ್ಪರ್ಶಿಯಾಗಿತ್ತು, ಉಂಟುಮಾಡಿದ ಪರಿಣಾಮವೂ ಅಷ್ಟೇ ಗಾಢವಾಗಿತ್ತು.

ಅತ್ಯಂತ ಜನಪ್ರಿಯ-ಅರ್ಥಪೂರ್ಣವಾದ  ಕಗ್ಗ- ‘ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ..ಫಲ ಮಾಗುವಂದು ತುತ್ತೂರಿ ದನಿಯಿಲ್ಲ…’ -ಇತ್ಯಾದಿ ಮಾರ್ಮಿಕ ಸಾಲುಗಳಲ್ಲಿ ಪ್ರಕೃತಿಯ ವಿದ್ಯಮಾನಗಳ ನಿಸ್ವಾರ್ಥ-ನಿಶಬ್ದ ಪ್ರಕ್ರಿಯೆಗಳ ನಿದರ್ಶನ ಉಸುರುವ ಮೂಲಕ, ಮನುಷ್ಯರ ಪ್ರಚಾರಪ್ರಿಯತೆ, ಶ್ರೇಷ್ಠತೆಯ ವ್ಯಸನ, ಸ್ವಾರ್ಥ-ಅಹಂಕಾರ, ಮತ್ಸರ, ಅಸಹಿಷ್ಣುತೆ  ಮುಂತಾದ ಅವಗುಣಗಳತ್ತ ಬೊಟ್ಟು ಮಾಡಿ ತೋರುವ ಧ್ವನ್ಯಾರ್ಥದ ದೃಶ್ಯ ಮೂಡಿಬಂತು. ‘ಮನ್ನಣೆಯ ದಾಹ’ದ ಸಂಗೀತಗಾರನೊಬ್ಬನ ಡಾಂಭಿಕ ನಡವಳಿಕೆಗಳನ್ನು ಬಿಂಬಿಸುವ ಆಷಾಢಭೂತಿಯ ಚಿತ್ರಣವನ್ನು ಸಂಚಾರಿಯ ಮೂಲಕ ಅಭಿವ್ಯಕ್ತಿಸಲಾಯಿತು. ಹೊಟ್ಟೆಯ ಪಾಡಿಗೆ ಅಕ್ಕಿ ಕದ್ದ ಬಡಹುಡುಗನನ್ನು ಶಿಕ್ಷಿಸಿದ ಸಮಾಜ, ಕೋಟಿಗಟ್ಟಲೆ ಲೂಟಿ ಮಾಡಿದ ಮನುಷ್ಯನನ್ನು ಸನ್ಮಾನಿಸಿ ಗೌರವಿಸುವ ಕೆಟ್ಟ ಪದ್ಧತಿಯ ವಿಪರ್ಯಾಸದ ವ್ಯಂಗ್ಯವನ್ನು ಎತ್ತಿತೋರಿಸಲಾಯಿತು.

ಇವೇ ಮುಂತಾದ ಜೀವನಧರ್ಮವನ್ನು ಸಾರುವ ಸಾಮಾಜಿಕ ಸಾಮರಸ್ಯ, ಸಹನಾಶೀಲತೆ, ವಿನಮ್ರತೆ, ಮಾನವೀಯತೆ, ಜೀವನದ ಹದ ಕಾಯ್ದುಕೊಳ್ಳುವ ಜಾಣ್ಮೆ, ದಾಂಪತ್ಯದ ಅನುರಾಗ-ಸಹಬಾಳ್ವೆ ಮುಂತಾದ ಶಾಶ್ವತ ಮೌಲ್ಯಗಳ ಕಣಜವಾದ ಇಂಥ ಅನೇಕ ಮನನೀಯ ಕಗ್ಗದ ನುಡಿಗಳು ಹೃದಯದಲ್ಲಿ ಸಂಚಲನವುಂಟು ಮಾಡಿತು. ಪದ-ಅರ್ಥವನ್ನು ಗಾಢವಾಗಿಸುವಂತಿದ್ದ  ಗಾಯಕ ಶ್ರ್ರಿವತ್ಸರ ಕಂಚಿನ ಕಂಠದ ಸ್ಫುಟತ್ವ ಹೆಚ್ಚಿನ ಪರಿಣಾಮಕ್ಕೆ ಪೂರಕವಾಯಿತು.

ಮುಂದೆ ದೇವರನಾಮ ‘ಗಣೇಶ ವಂದನೆ’-ನಿಜವಾದ ಪೂಜೆ ಎಂದರೇನು ಎಂಬ ತಾತ್ವಿಕ ವಿಶ್ಲೇಷಣೆ, ಬಾಹ್ಯಾಡಂಬರದ ತೋರಿಕೆಯ ಪೂಜೆಯ ವ್ಯರ್ಥ-ವ್ಯಂಗ್ಯಾರ್ಥಗಳನ್ನು ಸುಲಿಸುಲಿದು ತೋರುತ್ತ, ವಾಸ್ತವದಲ್ಲಿ ಘಟಿಸಿದ ತುಂಬು ಗರ್ಭಿಣಿ ಗಜರಾಜನ ಹೊಟ್ಟೆಯೊಳಗೆ ಬಾಂಬು ಸಿಡಿಸಿದ ಹೃದಯವಿದ್ರಾವಕ-ಕ್ರೌರ್ಯದ ಸುದ್ದಿಪತ್ರಿಕೆಗಳ ನಿಜಘಟನೆಯ ನಿದರ್ಶನದ ಮೂಲಕ ನ್ಯಾಯ-ಅನ್ಯಾಯಗಳ ಜಿಜ್ಞಾಸೆ ಮುಂತಾಗಿ ಮಥನದ ಪ್ರಶೆಗಳನ್ನು ಜರಡಿಯಾಡುವ , ಕಣ್ಮುಂದೆ ದೃಶ್ಯಗಳನ್ನು ಬಿಚ್ಚುವ, ಕಲಾವಿದೆಯರ ಪರಿಣತ ಅಭಿನಯ ಹಾಗೂ ಸೂಕ್ಷ್ಮಾಭಿವ್ಯಕ್ತಿ ಅವರ ಪ್ರತಿಭೆಯ ದ್ಯೋತಕವಾಗಿತ್ತು.

ಪರಿಸಮಾಪ್ತಿ ಮಾಡುವ ಅಂತ್ಯದ ಕೃತಿ ‘ತಿಲ್ಲಾನ’ ದ ಉತ್ಸಾಹದ ಮಿಂಚಿನೋಟದ ನೃತ್ತಗಳ ಉತ್ಸುಕತೆಯಲ್ಲಿ ಮಿಂದೆದ್ದ ಬುದ್ಧಿಮಾತು- ‘ ಬದುಕಿನಲ್ಲಿ ಧೈರ್ಯದ ಹೋರಾಟವಿರಲಿ, ಮೊಂಡುತನ ಬೇಡ, ಮತ್ಸರ-ದ್ವೇಷ ಬೇಡ, ವಿಶ್ವಾತ್ಮನಲ್ಲಿ ಶರಣು, ಪ್ರಶಾಂತತೆ ತುಂಬಿರಲಿ ಎಂಬ ಧ್ಯೇಯವಾಕ್ಯದೊಡನೆ ಪ್ರಸ್ತುತಿ ಮಂಗಳಕರವಾಯಿತು.

ಹೃದಯಸ್ಪರ್ಶೀ ಕಗ್ಗಗಳ ಸುಮಧುರ ಗಾಯನ, ಪೂರಕ ವಾದ್ಯವೃಂದ, ಎಲ್ಲಕ್ಕೂ ಮಿಗಿಲಾಗಿ ಮನಸ್ಸಿಗೆ ಆಪ್ಯಾಯಮಾನವಾಗಿದ್ದ ವಿಶಿಷ್ಟ ರಂಗಸಜ್ಜಿಕೆ- ಭಾವನೆಗಳನ್ನು ಘನೀಕರಿಸುವ ಹದವಾದ ಬೆಳಕು ( ಶ್ರೀನಿವಾಸ ಜಿ ಕಪ್ಪಣ್ಣ), ಹಿನ್ನಲೆಯ ಸಾಂಕೇತಿಕ ಚಿತ್ರಗಳ ನೆರಳು ಬೆಳಕಿನಾಟ ಇಡೀ ಕಾರ್ಯಕ್ರಮವನ್ನು ವೃತ್ತಿಪರಮಟ್ಟಕ್ಕೊಯ್ದಿತ್ತು.

*****

Recent Posts