Events in Bangalore

by | Oct 1, 2023

‘ವಿಶ್ವಾಮಿತ್ರ- ಗಾಯತ್ರಿ ನೃತ್ಯರೂಪಕದ ನಾಟಕೀಯ ದೃಶ್ಯಗಳು

ವೈ.ಕೆ.ಸಂಧ್ಯಾ ಶರ್ಮ

ಬೆಳಗಿನ ಮುದವಾದ ವಾತಾವರಣದಲ್ಲಿ ರಂಗದ ಮೇಲೆ ಮುದ್ದಾದ ಹಕ್ಕಿಗಳ ಚಿಲಿಪಿಲಿ. ಬಣ್ಣಬಣ್ಣದ ವಸ್ತ್ರಾಲಂಕಾರದಲ್ಲಿ, ಉದ್ದನೆಯ ಕುಚ್ಚಿನ ಹೆರಳು, ಮಲ್ಲಿಗೆಯ ಮುಡಿಯಲ್ಲಿ ಉದಯೋನ್ಮುಖ ನೃತ್ಯವಿದ್ಯಾರ್ಥಿಗಳು ಪರಮೋತ್ಸಾಹದಿಂದ ಗೆಜ್ಜೆ ಕಟ್ಟಿ ನರ್ತಿಸಿದ ದೃಶ್ಯವನ್ನು ನೋಡಬೇಕಿತ್ತು. ಅಲ್ಲಿ ನೃತ್ಯದ ಶಾಸ್ತ್ರಕ್ಕೆ ದುರ್ಬೀನು ಹಚ್ಚಿ ನೋಡುವ ಅಗತ್ಯವಿರಲಿಲ್ಲ. ಮಕ್ಕಳ ಪರಿಶ್ರಮದ ನೃತ್ಯಾಭ್ಯಾಸ, ಗೆಜ್ಜೆಗಳ ಲಯಬದ್ಧ ದನಿ, ಸುಂದರ ಆಂಗಿಕಾಭಿನಯ, ಅಭಿನಯದ ವೈಖರಿ    ಕಣ್ಮನ ತುಂಬಿತು.  ಪುಟ್ಟಮಕ್ಕಳಿಂದ ಹಿಡಿದು ನೈಪುಣ್ಯ ಪಡೆದ ಹಿರಿಯ ನೃತ್ಯ ಕಲಾವಿದರವರೆಗೂ ಅವರ ನೃತ್ಯದ ಹೆಜ್ಜೆಗಳಿಗೆ ಅನುವು ಮಾಡಿಕೊಟ್ಟ, ಪ್ರೋತ್ಸಾಹದ ಸಿಂಚನದೊಂದಿಗೆ ಅವರ ಬೆಳವಣಿಗೆಗೆ ಇಂಬು ನೀಡಿದ ಹಿರಿಯ ಭರತನಾಟ್ಯ ಗುರು ಜ್ಯೋತಿ ಪಟ್ಟಾಭಿರಾಮ್ ನೇತೃತ್ವದ ‘ಸಾಧನ ಸಂಗಮ’ದ 37 ನೇ ವಾರ್ಷಿಕೋತ್ಸವದ ಸುಂದರ ಕಾರ್ಯಕ್ರಮವು ಇತ್ತೀಚೆಗೆ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ವರ್ಣರಂಜಿತವಾಗಿ ನಡೆಯಿತು.

 ಕಾರ್ಯಕ್ರಮದ ಕಡೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಜ್ಯೋತಿ ಪಟ್ಟಾಭಿರಾಮ್ ಅವರ ಸುಮನೋಹರ ನೃತ್ಯಸಂಯೋಜನೆ-ನಿರ್ದೇಶನದಲ್ಲಿ ಮೂಡಿಬಂದ  ದಿ. ದೇವುಡು ನರಸಿಂಹ ಶಾಸ್ತ್ರಿಯವರ ಮಹೋನ್ನತ ಕೃತಿ ‘ಮಹಾಬ್ರಾಹ್ಮಣ’ವನ್ನು ಆಧರಿಸಿದ ‘ವಿಶ್ವಾಮಿತ್ರ- ಗಾಯತ್ರಿ’ ನೃತ್ಯರೂಪಕವು ನಾಟಕೀಯ ಸೆಳಮಿಂಚಿನ ದೃಶ್ಯಗಳಿಂದೊಡಗೂಡಿ ಆಕರ್ಷಕವಾಗಿತ್ತು. ಆಧ್ಯಾತ್ಮಿಕ ಶಕ್ತಿಯ ಗಾಢ ಅನುಭವವನ್ನು ಸಾಕ್ಷಾತ್ಕಾರಗೊಳಿಸುವ ವಿಶ್ವಾಮಿತ್ರನ ಬದುಕಿನ ಕೆಲವು ಘಟನೆಗಳನ್ನು ಎಳೆಎಳೆಯಾಗಿ ಅನಾವರಣಗೊಳಿಸುವ ಮೂಲಕ ಜೀವನ್ಮರಣ ಚಕ್ರದಲ್ಲಿ ತೊಳಲಾಡುತ್ತಿರುವ ಮನುಕುಲಕ್ಕೆ ಗಾಯತ್ರೀಮಂತ್ರವು ಸಂಜೀವಿನಿಯಾಗಿ ದತ್ತವಾಗುವ ಹೃದ್ಯ ನೃತ್ಯರೂಪಕ ಇದಾಗಿತ್ತು. ಅಹಂಭಾವದಿಂದ ಮೆರೆಯುತ್ತಿದ್ದ ಕೌಶಿಕರಾಜನ ಅಹಂಕಾರಕ್ಕೆ ಕಾಮಧೇನು ನಂದಿನಿಯ ಪ್ರಸಂಗದಿಂದ ಬಿದ್ದ ಪೆಟ್ಟು, ಛಲವಾಗಿ ಪರಿಣಮಿಸಿ ಮುಂದೆ ಅದರಿಂದ ಅವನ ಬದುಕಿನ ದಿಕ್ಕೇ ಬದಲಾಗುತ್ತದೆ, ಆತನ ಸಾಧನೆಯ ಪಥವಾಗುತ್ತದೆ.  ವಸಿಷ್ಠರ ಮೇಲಿನ ಹಟದಿಂದ ಕೌಶಿಕ ರಾಜನು ರುದ್ರದೇವನ ಕುರಿತು ಅಚಲ ತಪಸ್ಸು ಮಾಡುವನು. ಆಗ ವಸಿಷ್ಠ ಮಹರ್ಷಿಗಳ ಪತ್ನಿಯ ಕೋರಿಕೆಯಂತೆ ಆಕೆಯ ಸಹಾಯಕ್ಕೆ ಬರುವ ಬ್ರಹ್ಮ ದಂಡದಿಂದ ಕೌಶಿಕನಿಗೆ ಆ ಹಂತದಲ್ಲೂ ಸೋಲಾಗುವುದು. ಮುಂದೆ ಅವನು ತನ್ನ ಹಟವನ್ನು ಬಿಡದೆ,  ಶರಣು ಬಂದ ತ್ರಿಶಂಕು ರಾಜನ ಚಂಡಾಲತ್ವದ ನಿವಾರಣೆಗಾಗಿ ಮಹಾಯಜ್ಞವೊಂದನ್ನು ಕೈಗೊಂಡು, ಇಂದ್ರನ ಕಾರಣವಾಗಿ ಅದು ವಿಫಲವಾದರೂ ಕೌಶಿಕ, ಹಟದಿಂದ ತ್ರಿಶಂಕುವಿಗಾಗಿ ಸ್ವರ್ಗ ನಿರ್ಮಾಣ ಮಾಡಿಕೊಟ್ಟರೂ ಅವನ ಅಹಂ ಒಳಗೊಳಗೇ ಒಡೆದುಹೋಗುತ್ತದೆ. ಬ್ರಹ್ಮರ್ಷಿಯಾಗುವ ಅವನ ಸಾಧನೆಯ ಹಾದಿಯಲ್ಲಿ ಒಂದಲ್ಲ ಒಂದು ಅಡ್ಡಿ ಆತಂಕಗಳು ಆವರಿಸಿ, ಇಂದ್ರನಿಂದ ನಿಯೋಜಿತಳಾದ ಮೇನಕೆಯ ಮೋಹಪಾಶಕ್ಕೆ ಸಿಲುಕಿದವನ ತಪೋಭಂಗವಾಗಿ, ಅವನು ಮತ್ತೊಂದು ಮಜಲು ಕುಸಿಯುತ್ತಾನೆ.

ಹೀಗೆ ಕೌಶಿಕರಾಜನ ಪ್ರಗತಿಯ ಹೆಜ್ಜೆಗಳು ಪ್ರತಿಹಂತದಲ್ಲೂ ಕುಸಿಯುತ್ತ, ದುರ್ಬಲವಾಗುತ್ತ ಹೋದರೂ ಅವನ ಮನೋಸಂಕಲ್ಪದಿಂದ ಅರಿಷಡ್ವರ್ಗಗಳನ್ನು ಜಯಿಸಿ, ಕೊನೆಗೆ ಮಹಾಗಾಯತ್ರಿ ಮಂತ್ರದ ಪ್ರೋಕ್ತಾರನಾಗಿ ಗಾಯತ್ರೀದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಸಫಲನಾಗುತ್ತಾನೆ. ಇಷ್ಟರಲ್ಲಿ ಅವನು, ತನ್ನ ಹುಸಿ ಹಮ್ಮು-ಬಿಮ್ಮುಗಳ ಅಹಂಕಾರವನ್ನು ನೀಗಿಕೊಂಡವನಾಗಿ, ಆಧ್ಯಾತ್ಮಿಕವಾಗಿ ಎತ್ತರ ಬೆಳೆದ ಸಾಧಕನಾಗಿ, ವಿಶ್ವಕ್ಕೆ ಹಿತಬಯಸುವ ಮಿತ್ರನಾಗಿ, ಶಾಂತಿಮಂತ್ರದ ಅಧಿದೇವತೆಯಿಂದ ಅನುಗ್ರಹೀತನಾಗಿ, ಬ್ರಹ್ಮರ್ಷಿಯಾಗಿ, ಉದಾತ್ತ ಪುರುಷನಾಗಿ ಪರಿವರ್ತಿತನಾಗುವ ಈ ನೃತ್ಯರೂಪಕದ ಕಥೆ ಹೃದಯಸ್ಪರ್ಶಿಯಾಗಿದೆ. ತಾಮಸ ಗುಣದಿಂದ ಮೆರೆವ ಕೌಶಿಕ, ಹಂತಹಂತವಾಗಿ ಮಾಗುತ್ತ ಹೋಗಿ, ಸಾಧನಾ ಮಾರ್ಗಕ್ಕೆ ತೆರೆದುಕೊಳ್ಳುವ ಪರಿ ನಿಜಕ್ಕೂ ಮಾರ್ಮಿಕವಾಗಿ,  ಕಥಾನಡೆ ಕುತೂಹಲ ಬಿತ್ತುತ್ತಾ, ಆಸಕ್ತಿದಾಯಕವಾಗಿತ್ತು. ಪ್ರತಿಯೊಂದು ಸನ್ನಿವೇಶ ನಿರ್ಮಾಣದಲ್ಲೂ ಸ್ವಾರಸ್ಯಕತೆ, ನರ್ತಕ-ನಟರ ನಾಟಕೀಯ ಆಯಾಮದ ಅಭಿನಯ, ಸಹ ನರ್ತಕರ ಪರಿಣಾಮಕಾರಿ ನೃತ್ಯವೈಖರಿ, ಸರಳ ಸಾಹಿತ್ಯದ ಹಾಡುಗಳು, ಸನ್ನಿವೇಶಗಳ ರಚನೆ, ಆಕರ್ಷಕ  ವೇಷಭೂಷಣಗಳ ಪೂರಕತೆ, ಒಟ್ಟಾರೆ ನೃತ್ಯ ನಾಟಕದ ಚೈತನ್ಯದಾಯಕ ಅರ್ಪಣೆ  ಸಫಲತೆಯನ್ನು ಪಡೆದು, ಅಂತ್ಯದಲ್ಲಿ ಅಹಂಕಾರದ ಮೊಟ್ಟೆಯಾಗಿದ್ದ ರಾಜನೊಬ್ಬ ‘ಮಹಾಬ್ರಾಹ್ಮಣ’ ನಾದ ಔನ್ನತ್ಯವನ್ನು ಸಮಗ್ರವಾಗಿ ಧ್ವನಿಸಿತು.

 

 

**********

 

 

 

 

 

 

 

 

 

 

 

 

 

Recent Posts