Events in Bangalore

by | Apr 1, 2023

ಪದ್ಮಿನಿ ಪ್ರಿಯ – ರಜತ ವರ್ಷದ ವಿಶಿಷ್ಟ ನೃತ್ಯೋತ್ಸವ

-ವೈ.ಕೆ.ಸಂಧ್ಯಾ ಶರ್ಮ  

ಒಂದು ನಾಟ್ಯಶಾಲೆ ಎಂದರೆ ಕೇವಲ ನೃತ್ಯಶಿಕ್ಷಣ ನೀಡುವದಷ್ಟೇ ಅಲ್ಲ. ಅಲ್ಲಿಗೆ ಬಂದ ನೃತ್ಯಾಕಾಂಕ್ಷಿ ವಿದ್ಯಾರ್ಥಿಯ ಸರ್ವತೋಮುಖ ಉನ್ನತಿ ಮತ್ತು ಪರಿಪೂರ್ಣತೆಯನ್ನು ನೀಡುವುದು ಶಾಲೆಯ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಬಾನಸವಾಡಿಯ ಮುಖ್ಯರಸ್ತೆಯಲ್ಲಿರುವ ನಾಟ್ಯಾಚಾರ್ಯ ಮಿಥುನ್ ಶ್ಯಾಂ ನೇತೃತ್ವದ ‘ವೈಷ್ಣವಿ ನಾಟ್ಯಶಾಲೆ’ ಹೆಮ್ಮೆಯ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಗುರು-ಶಿಷ್ಯ ಪರಂಪರೆಯನ್ನು ಶುದ್ಧವಾಗಿ ಸಂರಕ್ಷಿಸುವ ದಿಸೆಯಲ್ಲಿ ಇಲ್ಲಿಗೆ ನೃತ್ಯ ಕಲಿಯುವ ವಿದ್ಯಾರ್ಥಿಗಳಿಗೆ ದೈವೀಕ ಕಲೆಯನ್ನು ಆಳವಾಗಿ ಅಭ್ಯಾಸ ಮಾಡಲು ಅನುವು ಮಾಡಿಕೊಡುವುದಲ್ಲದೆ, ಇದಕ್ಕೆ ಪೂರಕವಾಗಿ ಕರ್ನಾಟಕ ಸಂಗೀತ, ಯೋಗ ಇತ್ಯಾದಿ ವಿದ್ಯೆಗಳನ್ನು ಕಲಿಸುವಲ್ಲಿ ಆಸಕ್ತಿ ವಹಿಸುತ್ತದೆ. ಸುಮಾರು ಎಪ್ಪತ್ತು ಚದರ ವಿಸ್ತೀರ್ಣದ ವಿಶಾಲವಾದ ನೃತ್ಯಸ್ಥಳದಲ್ಲಿ ನರ್ತನ ಮಾಡಲು ಸಾಕಷ್ಟು ವಿಶಾಲವಾದ ಅಂಗಳ, ಹೆಚ್ಚಿನ ಓದಿಗೆ ನೃತ್ಯದ ಬಗೆಗಿನ ಉತ್ತಮ ಪುಸ್ತಕ ಭಂಡಾರ, ವೇಷಭೂಷಣ-ಅಲಂಕರಣಗಳ ಸೌಲಭ್ಯ ಮುಂತಾದವುಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಭರತನಾಟ್ಯದ ಶುದ್ಧನೃತ್ಯದ ಸೊಬಗಿಗೆ ನಾಟ್ಯಾಚಾರ್ಯ ಮಿಥುನ್ ಶ್ಯಾಂ ಅವರ ನರ್ತನ ವೈವಿಧ್ಯವನ್ನು ಕಣ್ಣಾರೆ ಕಾಣಬೇಕು. ಅಪರೂಪದ ಕೆಲವೇ ಪುರುಷ ನೃತ್ಯಕಲಾವಿದರಲ್ಲಿ ಇವರೂ ಒಬ್ಬರು. ‘ವೈಷ್ಣವಿ ನಾಟ್ಯಶಾಲೆ’ಯಲ್ಲಿ ಬಹು ಬದ್ಧತೆಯಿಂದ ಕಲಿಯುತ್ತಿರುವ ಶಿಷ್ಯವೃಂದಕ್ಕೆ ನಾಟ್ಯಕಲಿಸುತ್ತಿರುವುದು ಇವರ ಪಾಲಿಗೆ ಒಂದು ನೃತ್ಯಾರಾಧನೆ. ಕಾಲಿಗೆ ಗೆಜ್ಜೆಕಟ್ಟಿ ಮೂವತ್ತು ವರ್ಷಗಳನ್ನು ಕ್ರಮಿಸಿದ್ದು, ನರ್ತನವೇ ಉಸಿರಾಗಿ ಬಾಳುತ್ತ, ವೃತ್ತಿಪರತೆಗೆ ನಿಷ್ಠರಾಗಿರುವ ಇವರು, ದೇಶ-ವಿದೇಶಗಳಲ್ಲಿ ನೂರಾರು ಉತ್ತಮ ಕಾರ್ಯಕ್ರಮಗಳನ್ನು ನೀಡಿ ಅಂತರರಾಷ್ಟ್ರೀಯ ಕಲಾವಿದರಾಗಿ ಹೆಸರು ಪಡೆದವರು.  ಒಂದುಕಾಲದಲ್ಲಿ ಚತುರ್ಭಾಷಾ ನಟಿಯಾಗಿ ತಮ್ಮ ಅಮೋಘ ನೃತ್ಯಶೈಲಿಯಿಂದ ಗಮನ ಸೆಳೆದ ಅಭಿನೇತ್ರಿ ಪದ್ಮಿನಿ ರಾಮಚಂದ್ರನ್ ಅರ್ಥಾತ್ ಪದ್ಮಿನಿ ಪ್ರಿಯದರ್ಶಿನಿ ‘ವಳವೂರು ಬಾನಿ’ಯ ಒಂದು ಘನ ಪರಂಪರೆಯನ್ನೇ ಸೃಷ್ಟಿಸಿ ಹೋದ ಸ್ಮರಣೀಯ ನೃತ್ಯ ಕಲಾವಿದೆ ಹಾಗೂ ಹಿರಿಯ ನಾಟ್ಯಗುರು. ಇಂಥ ಗುರುಗಳ ಹೆಜ್ಜೆಯನ್ನು ಶ್ರದ್ಧೆಯಿಂದ ಅನುಸರಿಸುತ್ತ ಬಂದಿರುವ ‘ವೈಷ್ಣವಿ ನಾಟ್ಯಶಾಲೆ’ಯ ನಾಟ್ಯಾಚಾರ್ಯ ಮಿಥುನ್ ಶ್ಯಾಂ ಇತ್ತೀಚಿಗೆ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ನಾಟ್ಯಶಾಲೆಯ ರಜತ ಮಹೋತ್ಸವವನ್ನು ‘ಪದ್ಮಿನಿ ಪ್ರಿಯ-ನೃತ್ಯೋತ್ಸವ’ದ ಸ್ಮರಣಾಂಜಲಿಯನ್ನು ನವವಿನ್ಯಾಸದಲ್ಲಿ ಅರ್ಪಿಸಿದರು. ಬದ್ಧತೆಯ ಗುರು-ಪ್ರಾಯೋಗಿಕ ನೆಲೆಯ ಅನ್ವೇಷಕರಾದ ಮಿಥುನ್ ಅವರ ಹದಿನೈದು ಜನ ನಿಪುಣ ನರ್ತಕರ ತಂಡದ ಒಂದೊಂದು ನರ್ತನಗಳೂ ನಯನ ಮನೋಹರವಾಗಿದ್ದವು. ಗುರುಗಳಿಂದ ದತ್ತ ಪರಿಣತ ಶಿಕ್ಷಣಕ್ಕೆ ಶಿಷ್ಯರ ನೈಪುಣ್ಯ ಕನ್ನಡಿ ಹಿಡಿದಿದ್ದವು.

ನೃತ್ಯಾಧಿಪತಿ ನಟರಾಜನ ಕುರಿತ ಭಕ್ತಿಪ್ರಧಾನ ‘ವರ್ಣ’- ‘ಆರುಂ ದೈವಂ ಅರುಳ್ ವಾಯ್’ -ಎಂದು ಭಕ್ತ, ಭಕ್ತಿಪರವಶನಾಗಿ ದೈವವನ್ನು ಬಗೆಬಗೆಯಾಗಿ ಕರೆಯುವ ಆರ್ದ್ರತೆ, ವರ್ಚಸ್ವೀ ಅಭಿನಯದ ಬಗೆ ಮನನೀಯವಾಗಿತ್ತು. ನೃತ್ಯ ವ್ಯಾಕರಣದ ಪ್ರತಿಯೊಂದು ಅಂಶಗಳೂ ಮಿನುಗುವ ನೃತ್ಯ ಪ್ರಸ್ತಾರದ ಭಕ್ತಿ ತಾದಾತ್ಮ್ಯತೆಯ ನಿಮಗ್ನತೆ ನೋಡುಗರೆದೆಯಲ್ಲಿ ರಸಾನುಭವವನ್ನು ಜಿನುಗಿಸಿತು. ಮಿಥುನರ ಅವ್ಯಾಹತ ಕಂಚಿನ ಕಂಠದ, ಸ್ಫುಟವಾದ ನಟುವಾಂಗದ ಶೊಲ್ಲುಕಟ್ಟುಗಳು ಝೇಂಕಾರ ಗಮನಾರ್ಹವಾಗಿತ್ತು. ಮುಂದೆ- ಸೀತಾ ಸ್ವಯಂವರದ ಸುತ್ತ ಪರಿಭ್ರಮಿಸಿದ ಹೃದಯಸ್ಪರ್ಶೀ ಘಟನೆಗೆ, ದೃಶ್ಯಾತ್ಮಕ ಜೀವಂತಿಕೆ ಎರೆದ ಗುರು ಪದ್ಮಿನೀ ರಾಮಚಂದ್ರನ್ ನೃತ್ಯಸಂಯೋಜನೆಯ ‘ಅಗೋ ಬರುತಿಹನೆ ಶ್ರೀರಾಮ’-ಎಂಬ ಸುಮನೋಹರ ಕೃತಿ ರೋಮಾಂಚಕರವಾಗಿತ್ತು. ಅಂತ್ಯದಲ್ಲಿ ಪ್ರಸ್ತುತವಾದ ‘ತಿಲ್ಲಾನ’ದ ವೈಶಿಷ್ಟ್ಯವೆಂದರೆ, ಇಡೀ ಮಾರ್ಗ ಸಂಪ್ರದಾಯದ ಎಲ್ಲ ಕೃತಿಗಳ ಸಾರವನ್ನು ಹೂರಣದಂತೆ ತುಂಬಿದ ಮೋದಕದ ಸವಿ ಬಡಿಸಿದ, ವಿಶಿಷ್ಟ ಲಯವಿನ್ಯಾಸದಲ್ಲಿ ಮೂಡಿಬಂದ ಒಟ್ಟಂದದ ಸಮಷ್ಟಿ ಬಂಧ. ಇದು ಗುರು ಪದ್ಮಿನಿಯವರ ವಿಶಿಷ್ಟ ಕಾಣ್ಕೆ. ಪುಷ್ಪಾಂಜಲಿಯ ನೃತ್ತಾರ್ಚನೆ, ಜತಿಗಳ ಝಲಕ್, ಶಬ್ದದ ಸೊಗಡು, ವರ್ಣದ ಅಭಿನಯ ಪ್ರೌಢತೆ, ನವರಸಗಳ ಸೌದರ್ಯವನ್ನು ಒಳಗೊಂಡ ಲಯಾತ್ಮಕ ವಿನ್ಯಾಸದ ನೆಲೆಯಲ್ಲಿ ಪ್ರಸ್ತುತವಾದ ಈ ’ತಿಲ್ಲಾನ’-ಒಂದು ಅಪರೂಪದ ಸಂಯೋಜನೆಯಾಗಿತ್ತು.

 

 

 

 

 

 

 

 

 

 

**********

‘ಜಾನಾಮಿ ಜಾನಕಿ’ – ಹೊಸತನದಿ ಸೆಳೆದ ವಿಶಿಷ್ಟ ಪ್ರಯೋಗ  

-ವೈ.ಕೆ.ಸಂಧ್ಯಾ ಶರ್ಮ  

ಇದೊಂದು ಅಪರೂಪದ ಏಕವ್ಯಕ್ತಿ ಪ್ರದರ್ಶನ. ವಿಶಿಷ್ಟವೂ ಕೂಡ. ಇತ್ತೀಚೆಗೆ ಸೇವಾಸದನದಲ್ಲಿ ನಡೆದ, ನೃತ್ಯ-ನಾಟಕ-ಸಂಗೀತ-ಸಾಹಿತ್ಯ ಎಲ್ಲ ಕಲಾಪ್ರಕಾರಗಳೂ ಮೇಳೈವಿಸಿದ ಹೃದಯಸ್ಪರ್ಶೀ ಅನುಭವ ನೀಡಿದ ದೃಶ್ಯಾವಳಿಗಳಾಗಿತ್ತು ಇದು . ವಾಲ್ಮೀಕಿ ವಿರಚಿತ ರಾಮಾಯಣದ ಆಯ್ದ ಕೆಲ ಶ್ಲೋಕಗಳ ತದ್ವತ್ ನಿರೂಪಣೆಯ ಚಿತ್ರರೂಪಗಳನ್ನು ಕಣ್ಮುಂದೆ ತಂದುನಿಲ್ಲಿಸಿದ ಯಶಸ್ವೀ ಪ್ರಯತ್ನ. ಸುಮಾರು 45 ನಿಮಿಷಗಳ ಕಾಲ, ಭೂಜಾತೆ ಜಾನಕಿಯ ಜೀವನದಲ್ಲಿ ಸಂಭವಿಸಿದ ಕೆಲವು ಮುಖ್ಯಪ್ರಸಂಗಗಳನ್ನು ನಾಟಕೀಯ ಆಯಾಮದಲ್ಲಿ ಅನಾವರಣಗೊಳಿಸಿದವರು ಬೆಂಗಳೂರಿನ ‘ಕಲಾಸಂಪದ’ ಫೈನ್ ಆರ್ಟ್ಸ್ ಕೇಂದ್ರದ ನಿರ್ದೇಶಕಿ-ನೃತ್ಯಕಲಾವಿದೆ ವೀಣಾ ಸಿ.ಶೇಷಾದ್ರಿ. ಪ್ರೌಢ ಕಲಾರಸಿಕರ ಸಮ್ಮುಖ ಸೇವಾಸದನದಲ್ಲಿ ಬಿಚ್ಚಿಕೊಂಡ ಸೀತಾಮಾತೆಯ ದಿಟ್ಟವ್ಯಕ್ತಿತ್ವ, ಅಂತರಂಗದ ಪಿಸುಮಾತುಗಳನ್ನು ಧ್ವನಿಸಿದ ಮನನೀಯ ಪ್ರಕರಣಗಳು ಆಪ್ತವೆನಿಸಿದವು.

ಯಾಂತ್ರಿಕತೆ ಕಾಡದ, ಆಸಕ್ತಿ-ಕುತೂಹಲ ಕೆರಳಿಸಿದ ರಾಮಾಯಣದ ಪ್ರಮುಖ ಘಟನೆಗಳ ಸೂತ್ರದಲ್ಲಿ ಪೋಣಿಸಿದ ಜಾನಕಿಯ ಬದುಕಿನ ಪ್ರತಿಹೆಜ್ಜೆಗಳೂ ಕಣ್ಮುಂದೆ ಅಚ್ಚೊತ್ತಿದವು. ಇತಿಹಾಸ-ಪುರಾಣಗಳಲ್ಲಿ ಕಂಡ ಸೂಕ್ಷ್ಮ, ಮೃದು- ಸ್ವಭಾವದ, ಸಹನಾಮೂರ್ತಿ, ದುರ್ಬಲವೆಂದು ಕಂಡುಬರುವ  ನಾಜೂಕಿನ ವ್ಯಕ್ತಿತ್ವವಲ್ಲ ಇಲ್ಲಿಯ ಸೀತೆಯದು. ಅನ್ಯಾಯವನ್ನು ಪ್ರತಿಭಟಿಸುವ, ತನ್ನ ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ ಸಿಡಿದೇಳುವ, ಜ್ವಾಲಾಮುಖಿಯಾಗಬಲ್ಲ ಸಶಕ್ತ ಪಾತ್ರವಾಗಿ ಪ್ರಜ್ವಲಿಸುವ ಸೀತೆಯ ಬೇರೊಂದು ಮಜಲನ್ನು ಈ ‘ಜಾನಾಮಿ ಜಾನಕಿ’ ಸುಪರಿಚಯಿಸುತ್ತದೆ. ಇಂದು ಹೆಣ್ಣು ಸಮಾನತೆಗಾಗಿ ಹಾತೊರೆಯುವುದಕ್ಕಿಂತ ಗೌರವ -ಸ್ವಾಭಿಮಾನಗಳ ಪ್ರತೀಕವಾಗಿ ‘ಸ್ತ್ರೀ ಶಕ್ತಿ’ಯನ್ನು ಮೆರೆಯುವ ಘನಸ್ತರವನ್ನು ಸಂಕೇತಿಸುವ ಈ ಜಾನಕಿಯ ನಿರಂತರ ಪಯಣವನ್ನು ಕಲಾವಿದೆ ವೀಣಾ ಹೃದಯಸ್ಪರ್ಶಿಯಾಗಿ ಅರ್ಪಿಸಿದರು. ರಂಗದ ಮೇಲೆ ನಡೆಯುವ ಪ್ರತಿಘಟನೆಗಳಿಗೆ ಪೂರಕವಾಗಿ ಹಿನ್ನಲೆಯ ತೆರೆಯ ಮೇಲೆ ಮೂಡಿಬರುತ್ತಿದ್ದ ದೃಶ್ಯಚಿತ್ರಗಳು ಸಾಂಕೇತಿಕವಾಗಿದ್ದವು. ರಾವಣನ ಅಪಹರಣವನ್ನು ಪ್ರತಿಭಟಿಸುವ ಜಾನಕಿ, ವಿಹ್ವಲತೆಯಿಂದ ಹೊಯ್ದಾಡುವ ಮೊದಲದೃಶ್ಯವೇ ಆಕೆಯ ಭಾವತೀವ್ರತೆಯ ಅಭಿನಯದ ಸೊಗಡನ್ನು ಪರಿಚಯಿಸಿತು. ಎದುರಿಗೆ ಇನ್ನೊಂದು ಪಾತ್ರವಿರುವಂತೆ ಕಲಾವಿದೆ ತನ್ನ ಏಕಪಾತ್ರಾಭಿನಯದಲ್ಲಿ ರಾವಣನ ಬಲಾತ್ಕಾರವನ್ನು ಅನುಭವಜನ್ಯವಾಗಿಸುತ್ತಿರುವ ಸನ್ನಿವೇಶದಲ್ಲಿ ಮೊಳಗಿದ ರಾವಣನ ಆರ್ಭಟದ ಧ್ವನಿ, ಮಿಂಚು-ಗುಡುಗುಗಳ ಶಬ್ದ ಘಟನೆಯನ್ನು ಮತ್ತಷ್ಟು ಗಹನವಾಗಿಸಿತು. ಮುಂದೆ-ಅಶೋಕವನದಲ್ಲಿ ರಕ್ಕಸಿಯರಿಂದ ಹಿಂಸೆಗೊಳಗಾದ ಕಲಾವಿದೆಯ ಹರಿತ ಅಭಿವ್ಯಕ್ತಿ ಅತ್ಯಂತ ಪರಿಣಾಮಕಾರಿಯಾಗಿತ್ತು. ಈ ಹಂತದಲ್ಲಿ ಅಸಹಾಯಕಳಾದ ಜಾನಕಿ, ಹತಾಶಳಾಗಿ ಭೂಮಿತಾಯಿಯ ಮೈಯನ್ನು ಸ್ಪರ್ಶಿಸುತ್ತ ಸಾಂತ್ವನಗೊಳ್ಳುವ ನೋಟ ಕರುಳು ಮಿಡಿಸಿತು. ಕಣ್ಣೀರಾಗುತ್ತಲೇ ಜಾನಕಿ, ನೆನಪಿನಾಳಕ್ಕೆ ಜಾರುವಳು. ರೈತ ನೆಲವನ್ನು ಸಂಭ್ರಮದಿ ಉಳುವಾಗ ಭೂಮಿಯ ಒಡಲಲ್ಲಿ ಸಿಗುವ ಮಗು, ಜನಕ ಮಹಾರಾಜನು ಅದನ್ನು ಲಾಲಿಸುವ ಪಾಲಿಸುವ ಅಕ್ಕರೆಯ ಪರಿ, ಮಗು ಅಂಬೆಗಾಲಿಕ್ಕಿ ಹರಿದಾಡಿ, ಬೆಳೆದು, ಜೊತೆಗಾತಿಯರೊಡನೆ ವಿವಿಧ ಆಟಗಳನ್ನಾಡುತ್ತ, ಹಾಡುತ್ತ, ನಲಿಯುತ್ತ, ನದಿಯಲ್ಲಿ ಈಜುತ್ತ ದೊಡ್ದವಳಾಗುವ ವಿವಿಧ ಹಂತಗಳನ್ನು ಕಲಾವಿದೆ ನಿರ್ವಹಿಸಿದ ಬಗೆ ಮನೋಹರವಾಗಿತ್ತು. ಚೆಂಡಾಟ ವಾಡುತ್ತಾ, ಶಿವಧನಸ್ಸಿನ ಕೆಳಗೆ ಹೋದ ಚೆಂಡು ತೆಗೆದುಕೊಳ್ಳಲು ಸಲೀಸಾಗಿ ಧನಸ್ಸನ್ನು ಸರಿಸುವ ದೃಶ್ಯ, ಸ್ವಯಂವರದಲ್ಲಿ ಗೆಲುವು ಸಾಧಿಸಿದ ಶ್ರೀರಾಮನ ಕೈಹಿಡಿವ ಜಾನಕಿ, ಲಜ್ಜೆಯಿಂದ ಸಪ್ತಪದಿ ತುಳಿವಾಗ ಹೆಣ್ತನವೇ ರೂಪಾಗಿ ಬಾಗಿ-ಬಳುಕಿದ ಒಂದೊಂದು ಅಭಿವ್ಯಕ್ತಿಯೂ ನವಿರಾಗಿ ಮೂಡಿಬಂತು. ವಿವಾಹವಾಗಿ ಅಯೋಧ್ಯೆಯನ್ನು ಪ್ರವೇಶಿಸಿ, ಕೈಕೇಯಿಯ ಆಗ್ರಹಕ್ಕೆ ತುತ್ತಾಗಿ ವನವಾಸ ಅನುಭವಿಸಿದ ಪ್ರಸಂಗಗಳೆಲ್ಲ ಬಹು ಸಂಕ್ಷಿಪ್ತವಾಗಿ ನಿರೂಪಿತವಾದ ಜಾಣ್ಮೆ, ಚಿತ್ರಕೂಟದ ಸುಮನೋಹಾರ ಪರಿಸರ, ಹಕ್ಕಿಗಳ ಇಂಚರ, ಶೂರ್ಪನಖಿಯ ಆಗಮನ, ಅವಳ ಅಭೀಪ್ಸೆಯ ನೋಟ ಸಹೋದರರತ್ತ ಹರಿದು, ಅವಳು ಕಿವಿ-ಮೂಗುಗಳನ್ನು ಕಳೆದುಕೊಂಡ ಮುಂತಾದ ಚಿತ್ರಣಗಳು ಚುರುಕಾಗಿ ಸಾಗಿದರೆ, ಕಲಾವಿದೆ ಅಲ್ಲೆಲ್ಲ ವಿವಿಧ ಭಾವ-ರಸಗಳ ಅಭಿವ್ಯಕ್ತಿಯಲ್ಲಿ ನೈಪುಣ್ಯ ತೋರಿದರು.

ಸುಲಭವಲ್ಲದ ಬಹು ಪಾತ್ರಭಿವ್ಯಕ್ತಿಯಲ್ಲಿ ‘ಸೈ’ ಎನಿಸಿಕೊಂಡ ವೀಣಾ, ಅಂತ್ಯದಲ್ಲಿ ಮತ್ತಷ್ಟು ಹೃದ್ಯವೆನಿಸುತ್ತಾರೆ. ಗರ್ಭಿಣಿಯಾದ ಜಾನಕಿ ಕಾಡುಸೇರಿ, ಲವ-ಕುಶರಿಗೆ ಜನ್ಮವಿತ್ತು, ನೆಮ್ಮದಿಯ ಜೀವನ ಕಾಣುವಷ್ಟರಲ್ಲಿ ಹಟಾತ್ ಶ್ರೀರಾಮನ ದರ್ಶನದಿಂದ ಆಘಾತಗೊಳ್ಳುವ, ತನ್ನ ಆತ್ಮಗೌರವಕ್ಕೆ ಧಕ್ಕೆ ಬಂದಾಗ ತನ್ನ ಅಸ್ಮಿತೆ ಮೆರೆದ ಜಾನಕಿಯ ಸ್ವಾಭಿಮಾನ ಕಿಚ್ಚೆದ್ದು, ತ್ಯಕ್ತ ಪತಿಯನ್ನು ಧಿಕ್ಕರಿಸಿ, ಭೂಗರ್ಭ ಸೇರುವ ಮಾಂತ್ರಿಕ ದೃಶ್ಯ ನೋಡುಗರ ಹೃದಯವನ್ನು ಕದಲಿಸಿತು. ವಿವಿಧ ಪಾತ್ರಗಳು ತಂತಮ್ಮ ಮಟ್ಟಕ್ಕೆ ಅರ್ಥೈಸಿಕೊಳ್ಳುವ ಜಾನಕಿಯ ಘನವ್ಯಕ್ತಿತ್ವವನ್ನು ಕಲಾವಿದೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ, ಜಾನಕಿಯಾಗಿ ಝಳಪಿಸುತ್ತ ನಿಖರತೆಯಿಂದ ಹೊರಹೊಮ್ಮಿದರು. ಕಲಾವಿದೆಯ ಸಾಮರ್ಥ್ಯಕ್ಕೆ ತಕ್ಕಂತೆ ಘಟನೆಗಳ ಚಿತ್ರಕಥೆಯನ್ನು ಮನೋಜ್ಞವಾಗಿ ಹೆಣೆದು, ‘ಜಾನಾಮಿ ಜಾನಕಿ’ಯ ಹೊಸ ಪರಿಕಲ್ಪನೆಯನ್ನು ರೂಪಿಸಿದ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರ ಪ್ರಯೋಗ ಸಫಲವಾಗಿತ್ತು. ಮನಮುಟ್ಟುವ ಸಂಗೀತ ನೀಡಿದ ಡಾ. ದೀಪಕ್ ಪರಮಶಿವನ್ ಮತ್ತು ಪ್ರಭಾವಶಾಲಿ ಬೆಳಕಿನ ವಿನ್ಯಾಸ ನೀಡಿದ ಮಹಾದೇವಸ್ವಾಮಿಯವರ ಕಾರ್ಯ ಶ್ಲಾಘನೀಯ. ಜಾನಕಿಯ ವ್ಯಕ್ತಿತ್ವನ್ನು ಅರಿತೆನೆನ್ನುವ ರಾವಣ, ತ್ರಿಜಟೆ, ಜನಕ ಮಹಾರಾಜ, ಶ್ರೀರಾಮ, ಶೂರ್ಪನಖಿ ಮುಂತಾದವರ ಉದ್ಗಾರಗಳು, ಅವರ ಧ್ವನಿಗಳಲ್ಲಿದ್ದ ವಿವಿಧಾರ್ಥಗಳು ‘ಜಾನಾಮಿ ಜಾನಕಿ’ಯ ಸಮಷ್ಟಿ ಪ್ರಜ್ಞೆ. ಸರಳತೆಯ ಸಾಕಾರವಾಗಿದ್ದ ಜಾನಕಿಯ ನಿರಾಭರಣದ ಉಡುಗೆ ಪ್ರಯೋಗದ ನಾವೀನ್ಯತೆಗೆ ಇನ್ನೊಂದು ಮೆರುಗು. ಎಲ್ಲಕ್ಕಿಂತ ಮಿಗಿಲಾಗಿ ಜಾನಕಿ ತಾನು ಹೊದ್ದಿದ್ದ ಶ್ವೇತವರ್ಣದ ದುಕೂಲವನ್ನು ಸನ್ನಿವೇಶಕ್ಕೆ ತಕ್ಕಂತೆ ಪರಿಕರವಾಗಿ ಬಳಸಿದ ಜಾಣ್ಮೆ-ಕಲಾತ್ಮಕತೆಯ ಮಜಲು ಮೆಚ್ಚುಗೆಗೆ ಅರ್ಹವಾಯಿತು.

 

 

 

 

 

 

 

 

 

 

 

 

**********

 

 

 

 

 

 

 

 

 

 

 

 

 

Recent Posts