ಕಲಾವಿದರಿಗೆ ಆರ್ಥಿಕ ಭದ್ರತೆ ದೊರಕಿಸಲು ಸರ್ಕಾರಿ ಉದ್ಯೋಗಗಳ ಸೃಷ್ಟಿ ಸಾಧ್ಯವಿಲ್ಲವೇ?

by | May 1, 2022

‘ ಕಲೆ ‘ ಎಂಬ ಬಹು ಸುಂದರ ಪುಷ್ಪದ ವಿವಿಧ  ಎಸಳುಗಳಂತೆ ಇಂದು ಅನೇಕ ಪ್ರತಿಭಾವಂತ ಕಲಾವಿದರು ನಮ್ಮ ಮುಂದಿದ್ದಾರೆ. ಸದಾ ಸುಗಂಧವನ್ನು ಬೀರುತ್ತಾ, ಕಲಾ ರಸಿಕರಿಗೆ ನೀಡುವ ಮನೋರಂಜನೆ ಹಾಗೂ ಕಲಾ ಸೌಂದರ್ಯದ ಪ್ರಸ್ತುತಿಯಲ್ಲಿ ನಮ್ಮ ಕಲಾವಿದರು ಎಂದೆಂದಿಗೂ ಹಿಂದೆ ಬಿದ್ದಿಲ್ಲ. ಸಂಗೀತಗಾರರೇ ಇರಲಿ, ನೃತ್ಯ- ನಾಟಕ ಕಲಾವಿದರೇ ಇರಲಿ ಅಥವಾ ವಾದನ ಕಲಾವಿದರೇ ಆಗಿರಲಿ ಶತ- ಶತಮಾನಗಳಿಂದ  ತಮ್ಮ ಪೂರ್ವಿಕರಿಂದ ತಮಗೆ ದಕ್ಕಿರುವ ಈ ದೈವಿಕ ಕಲೆಯನ್ನು, ಯಾವುದೇ ಹೆಚ್ಚಿನ ಫಲಾಪೇಕ್ಷೆಗಳಿಲ್ಲದೇ ಮುಂದಿನ ಜನಾಂಗಕ್ಕೆ ಧಾರೆ ಎರೆದುಕೊಂಡು ಬಂದಿದ್ದಾರೆ. ಶಾಸ್ತ್ರೀಯ ಕಲಾವಿದರೇ ಇರಲಿ ಅಥವಾ ಜಾನಪದ ಕಲಾವಿದರುಗಳೇ ಆಗಿರಲಿ, ಭರತಖಂಡದ ಸುಸಂಸ್ಕೃತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ, ಬೀಳುವವರೂ ಅಲ್ಲ. ಜನರಿಗೆ ಕಲೆಯ ಬಗೆಗೆ ಭಕ್ತಿ, ಶಿಸ್ತು, ಆನಂದ, ಗೌರವ ಇತ್ಯಾದಿ ಮೂಡಿಸುವಲ್ಲಿ ಬಹುಮುಖ್ಯ ಪಾತ್ರವಿರುವುದು ಕಲಾವಿದರದ್ದೇ.

ನಾನು ಮಾಡುತ್ತಿದ್ದ ಅರ್ಥಶಾಸ್ತ್ರ ಉಪನ್ಯಾಸಕ ವೃತ್ತಿಯನ್ನು ಬಿಟ್ಟು, ಪೂರ್ಣಪ್ರಮಾಣದ ಕಲಾವಿದನಾಗುತ್ತೇನೆಂದು ಮನೆಯಲ್ಲಿ ತಿಳಿಸಿದಾಗ ಅಜ್ಜನಿಂದ ಬಂದ ಮೊದಲ ಪ್ರಶ್ನೆಗಳು- “ವೃತ್ತಿಯನ್ನು ಬಿಟ್ಟು ಕೂತರೆ ನಿನ್ನ ಹೊಟ್ಟೆ ಪಾಡು ಏನು? ಆರ್ಥಿಕವಾಗಿ ನಿನ್ನನ್ನು ನೀನು ನೋಡಿಕೊಂಡಿದ್ದೀಯಾ? ಕಲೆಯು ಮನಸ್ಸಿನ ಸಂತೋಷಕ್ಕಾಗಿ ಮಾತ್ರ ಮಗಾ” ಎಂಬ ಅವರ ಮಾತು ಈಗಲೂ ನನ್ನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಉತ್ತರವನ್ನು ಪಡೆದುಕೊಳ್ಳಲಾಗದೆ ಸೋತಿರುತ್ತದೆ. ಅದು ಹೌದಲ್ವಾ?! ಕಲೆಯ ಮೂಲಕ ಇಡೀ ಸಮಾಜಕ್ಕೆ ಸಂತೋಷವನ್ನು ನೀಡುವ ಕಲಾವಿದ ನಿಜಕ್ಕೂ ತನ್ನೊಳಗೆ ನೋವನ್ನು ಇಟ್ಟುಕೊಂಡಿದ್ದಾನೆ. ಆತನನ್ನು ಕಾಡುತ್ತಿರುವುದು ಆರ್ಥಿಕ ಅಭದ್ರತೆ.

ಇದಕ್ಕೊಂದು ಸರಿಯಾದ ಉದಾಹರಣೆ ಎಂಬಂತೆ ಕೊರೋನಾ ಜಗತ್ತಿನಾದ್ಯಂತ ರಕ್ಕಸನಂತೆ ರೌದ್ರ ತಾಂಡವವನ್ನಾಡಿ, ಭಾರತಕ್ಕೂ ಕಾಲಿಟ್ಟಿತು. ಒಂದನೇ ಅಲೆ ಬಂದ ಸಮಯದಲ್ಲಿ ಮಧ್ಯಮ ವರ್ಗ ಹಾಗೂ ಬಡವರ್ಗದ  ಜನರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದು ಎಲ್ಲರಿಗೂ ತಿಳಿದಿದೆ. ಸಾಮಾನ್ಯ ಆರ್ಥಿಕ ವಲಯಗಳೆಲ್ಲಾ ನೆಲಕಚ್ಚಿರುವಂತೆ, ಕಲಾವಿದರ ಬಾಳಿನಲ್ಲೂ ಬಿರುಗಾಳಿ ಎದ್ದಿದ್ದಂತೂ ಸುಳ್ಳಲ್ಲ. ಕೈ ತುಂಬಾ ದುಡಿಯುತ್ತಿದ್ದ, ತಮ್ಮ ಕಾಲ ಮೇಲೆ ದೃಢವಾಗಿ ನಿಂತಿದ್ದ ಹಲವು ಕಲಾವಿದರು ಮಂಕಾದರು. ‘ಕಲಾವಿದ’ನೆಂಬ ಹಣೆಪಟ್ಟಿಗೂ ಆರ್ಥಿಕ ಅಭದ್ರತೆ  ಕಾಡಿತು. ಮನೆಯಲ್ಲಿ ಎಲ್ಲರೂ ಕಲಾವಿದರೆಂದರೆ ಕೇಳುವುದೇ ಬೇಡ, ಕಲಾ ತರಗತಿಗಳು ಸಂಪೂರ್ಣ ಬಂದ್. ಇನ್ನು, ಆನ್ಲೈನ್ ತರಗತಿಗಳ ಕಡೆಗೆ ಮಕ್ಕಳ- ಪೋಷಕರ ಆಸಕ್ತಿ ಕಡಿಮೆ. ಇಂತಹ ಹಲವಾರು ಸಮಸ್ಯೆಗಳು ಎರಡನೇ ಅಲೆಯಲ್ಲಿಯೂ ಮರುಕಳಿಸಿದವು. ಮೂರನೇ ಅಲೆಯಲ್ಲಿ ಹೇಳುವಷ್ಟೇನೂ ಅಪಾಯವನ್ನು ಒಡ್ಡಲಿಲ್ಲ. ಇದು ಕೇವಲ ಒಂದು ಉದಾಹರಣೆ ಅಷ್ಟೇ.

ಇಂತಹ ಹಲವಾರು ಕಷ್ಟಕರ ಸಂದರ್ಭಗಳಲ್ಲಿ ಕಲಾವಿದರಿಗೆ ಆರ್ಥಿಕ ಭದ್ರತೆ ಒದಗಿಸಲು ಸರ್ಕಾರಿ ಉದ್ಯೋಗಗಳ ಸೃಷ್ಟಿ ಸೂಕ್ತ ಮತ್ತು ಅನಿವಾರ್ಯ ಆಯ್ಕೆ. ಖಂಡಿತವಾಗಿ ಎಲ್ಲಾ ಕಲಾವಿದರನ್ನೂ ಈ ಪ್ರಕ್ರಿಯೆಯೊಳಗೆ ಪರಿಗಣಿಸಲು ಸಾಧ್ಯವಿಲ್ಲ. ಅರ್ಹ ಕಲಾವಿದ ಅಭ್ಯರ್ಥಿಗಳನ್ನು ಈ ಯೋಚನೆಯಲ್ಲಿ ತೆಗೆದುಕೊಳ್ಳಬಹುದು. 2009ನೇ ಸಾಲಿನಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಸಂಗೀತ – ನೃತ್ಯ – ಚಿತ್ರಕಲಾ ಶಿಕ್ಷಕರನ್ನೂ ಪರಿಗಣಿಸಲಾಗಿತ್ತು. ತದನಂತರ ಅವಕಾಶಗಳು ಕಡಿಮೆಯಾದವು. ಇರುವ ಅವಕಾಶಗಳನ್ನು ಹೆಚ್ಚಿಸಿದರೆ ಇನ್ನೂ ಅನೇಕರಿಗೆ ದಾರಿಯಾಗಬಲ್ಲದು.

ಇಂದು ವಿದ್ವತ್ ದರ್ಜೆಯ ಪರೀಕ್ಷೆಗಳಿಗೆ ಹಲವಾರು ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ಹಾಜರಾಗಿ ತೇರ್ಗಡೆಯಾಗುತ್ತಿದ್ದಾರೆ. ವಿದ್ವಾನ್- ವಿದುಷಿ ಎಂಬ ಗೌರವದ ಹಣೆಪಟ್ಟಿಯೊಂದಿಗೆ, ವಿದ್ವತ್ ದರ್ಜೆಯ ವಿದ್ಯಾರ್ಹತೆಯೊಂದಿಗೆ ವೃತ್ತಿ ಅನುಭವ ಮತ್ತು ಅವರಲ್ಲಿರುವ ಆಸಕ್ತಿಯನ್ನು ಪರಿಗಣಿಸಿ ಪ್ರಾಥಮಿಕ ಶಾಲೆಯಲ್ಲಿಯೋ ಅಥವಾ ಪ್ರೌಢಶಾಲೆಯಲ್ಲಿಯೋ ಉದ್ಯೋಗ ನೀಡುವ ಭರವಸೆ ಘನ ಸರ್ಕಾರದಿಂದ ನಡೆದರೆ ಒಳಿತು.

ಇನ್ನು ಕರ್ನಾಟಕದಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳಿದ್ದು, ಅಲ್ಲಿಯ ಕೆಲವೊಂದು ವಿಶ್ವವಿದ್ಯಾನಿಲಯಗಳಲ್ಲಿ ಸಂಗೀತ, ನೃತ್ಯ, ವಾದನ ವಿಭಾಗದ ಬೋಧಕ ಹುದ್ದೆ ಖಾಲಿಯಿದೆ. ಸರಿಯಾದ ಅರ್ಹತೆ- ವಿದ್ಯಾರ್ಹತೆ ಹೊಂದಿರುವ ಅರ್ಹ ಕಲಾವಿದರನ್ನು ಪರಿಗಣಿಸಿದರೆ ನಿಜಕ್ಕೂ ಉತ್ತಮ. ಇಂದು ಹಲವಾರು ಕಲಾವಿದರು ಪ್ರದರ್ಶನ ಕಲೆ- ಸಂಗೀತ- ದೃಶ್ಯ ಕಲೆ ಇತ್ಯಾದಿ ವಿಭಾಗಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ಕಲಾ ಶಿಕ್ಷಣವನ್ನು ಮುಖ್ಯ ಭಾಗವಾಗಿ ಪರಿಗಣಿಸಿರುವುದಕ್ಕೆ ನಿಜಕ್ಕೂ ಒಂದೊಳ್ಳೆ ನ್ಯಾಯ ಸಿಕ್ಕಂತಾಗುತ್ತದೆ.

ಕಲಾ ಶಿಕ್ಷಣದ ಬಗ್ಗೆ ಇರುವ ಮೌಲ್ಯಗಳನ್ನು ಸಾಮುದಾಯಿಕವಾಗಿ ಪಸರಿಸಲು, ಆ ಮೂಲಕ ಕಲಿಯುವ  ವಿದ್ಯಾರ್ಥಿಗಳಲ್ಲಿಯೂ ತಿಳುವಳಿಕೆ ಮೂಡಿಸಲು ಈ ಎಲ್ಲಾ ಯೋಜನೆಗಳು ಖಂಡಿತವಾಗಿ ಸಹಕಾರಿ. ಅಷ್ಟು ಮಾತ್ರವಲ್ಲದೇ ಕಲಾದೇವಿಯ ಸೇವೆಯನ್ನು ನಿರಂತರವಾಗಿ ನಡೆಸಿ, ಕಲಾ ಯಜ್ಞದ ಹವಿಸ್ಸನ್ನು ಎಲ್ಲಾ ಕಲಾರಾಧಕರಿಗೆ ನೀಡುವ ಕಲಾವಿದರ ಬದುಕು ಇಂತಹ ಹಲವಾರು ಯೋಜನೆ – ಯೋಚನೆಗಳ ಸಾಕಾರದಿಂದ ಬದಲಾದಿತಲ್ಲವೇ?!

*****

Recent Posts