ಭೋಗ ನಂದೀಶ್ವರನ ಗವಾಕ್ಷಿಗಳ ಕಿರುನೋಟ

by | Aug 1, 2022

ಭೋಗ ನಂದೀಶ್ವರನ ಗವಾಕ್ಷಿಗಳ ಕಿರುನೋಟ

–   ದಿವ್ಯಾ ಪ್ರಸಾದ್

ಭೋಗ ನಂದೀಶ್ವರ ದೇವಾಲಯದ ಪ್ರವೇಶದ್ವಾರ

ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಗಿರಿಧಾಮ ಪ್ರವಾಸಿಗರ ಹಾಗೂ ಚಾರಣಪ್ರಿಯರ ಅಚ್ಚುಮೆಚ್ಚಿನ ತಾಣ. ನಗರ ಜೀವನದಿಂದ ಬೇತ್ತು ಮೋಜಿಗಾಗಿ ಬರುವ ಬಹಳ ಮಂದಿ ಪ್ರವಾಸಿಗರಿಗೆ ಬೆಟ್ಟದ ತಪ್ಪಲಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಾಲಯ ಮತ್ತು ಅದರ ಇತಿಹಾಸದ ಬಗ್ಗೆ ಹೆಚ್ಚಿನ ಅರಿವಿರುವುದಿಲ್ಲ. ಶಿಲ್ಪಕಲೆಗಳ ಆಗರವಾಗಿರುವ ಈ ಭೋಗ ನಂದೀಶ್ವರ ದೇವಾಲಯವು ಒಂಬತ್ತನೇ ಶತಮಾನದ ನೊಳಂಬ ರಾಜವಂಶದ ನೊಳಂಬಾದಿ ರಾಜನು ನಿರ್ಮಿಸಿದ್ದು, ಕಾಲಾನಂತರದಲ್ಲಿ ಗಂಗ ರಾಜರು, ಚೋಳ ರಾಜರು, ಹೊಯ್ಸಳ ರಾಜರು ಹಾಗೂ ವಿಜಯನಗರ ಅರಸರು ಈ ದೇವಾಲಯದ ಜೀರ್ಣೋದ್ದಾರ ಹಾಗೂ ಅಭಿವೃದ್ದಿ ಮಾಡಿರುವರು ಎಂದು ಹೇಳಲಾಗಿದೆ. ದೇವಾಲಯದ ಆವರಣದಲ್ಲಿರುವ ಎರಡು ಪ್ರಮುಖ ದೇವರಗುಡಿಗಳು: ಅರುಣಾಚಲೇಶ್ವರ ಮತ್ತು ಭೋಗ ನಂದೀಶ್ವರ. ಗಂಗರು ನಿರ್ಮಿಸಿದ ಅರುಣಾಚಲೇಶ್ವರ ಹಾಗೂ ಚೋಳರು ನಿರ್ಮಿಸಿದ ಭೋಗ ನಂದೀಶ್ವರ ಕ್ರಮವಾಗಿ ಶಿವನ ಬಾಲ್ಯ ಹಾಗೂ ಯೌವ್ವನದ ಸಂಕೇತವಾದರೆ, ನಂದೀ ಬೆಟ್ಟದ ಮೇಲಿರುವ ಯೋಗಾ ನಂದೀಶ್ಷ್ವರ ಕೊನೆಗೆ  ಶಿವನ ವಿರಕ್ತಿಯ ಹಂತವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಅರುಣಾಚಲೇಶ್ವರ ಹಾಗೂ ಭೋಗ ನಂದೀಶ್ವರನ ನಡುವೆ ಹೊಯ್ಸಳರು ಸ್ಥಾಪಿಸಿರುವ ಉಮಾಮಹೇಶ್ವರನ ದೇಗುಲ ಹಾಗೂ ಕಲ್ಯಾಣಮಂಟಪವಿದೆ.
ಈ ದೇವಾಲಯದಲ್ಲಿ ಅನೇಕ ವೈವಿಧ್ಯಮಯ ಶಿಲ್ಪಗಳಿವೆ. ಬೇಡರ ಕಣ್ಣಪ್ಪ, ಬ್ರಹ್ಮ, ವಿಷ್ಣು, ದರ್ಪಣ ಸುಂದರಿಯರು, ನಿಗೂಢ ಜೀವಿಗಳು, ಕುಬ್ಜ ಗಣಗಳು, ಗಿರಿಜಾ ಕಲ್ಯಾಣದ ಕಥೆಯನ್ನು ಸಾರುವ ಶಿಲ್ಪಗಳು, ಸಪ್ತ ಮಾತ್ರಿಕೆಯರು ಹೀಗೆ ಹಲವಾರು ಶಿಲ್ಪಗಳನ್ನು ಕಣ್ಣಿಗೆ ಕಟ್ಟುವಂತೆ ಕೆತ್ತಿದ್ದಾರೆ. ಹಲವು ಸೂಕ್ಷ್ಮಾತಿ ಸೂಕ್ಷ್ಮ ವಿವರಗಳನ್ನು ಅತಿ ನಾಜೂಕಿನಿಂದ ಕೆತ್ತಿರುವ  ಶಿಲ್ಪಿಗಳ  ಕಲಾ ನೈಪುಣ್ಯ ನೋಡುಗರ ಮನ ಸೂರೆಗೊಳ್ಳುತ್ತದೆ. ಇದೆಲ್ಲದರ ಮಧ್ಯೆ ನನ್ನನ್ನು ಬೆರಗು ಗೊಳ್ಳುವಂತೆ ಮಾಡಿದ್ದು ಕಲ್ಲಿನಲ್ಲಿ ಕೆತ್ತಿರುವ “ಗವಾಕ್ಷಿ” ಗಳ ಅದ್ಭುತವಾದ ಕೆತ್ತನೆ ಹಾಗೂ ಅದರ ಪರಿಕಲ್ಪನೆ.
‘ಗವಾಕ್ಷ’ ಎಂಬುದು ಸಂಸ್ಕೃತ ಪದವಾಗಿದ್ದು, ಇದರರ್ಥ “ಗೂಳಿಯ ಅಥವಾ ಹಸುವಿನ ಕಣ್ಣು”. ಕನ್ನಡ ನಿಘಂಟುಗಳಲ್ಲಿ ‘ಗವಾಕ್ಷಿ’ ಎಂಬ ಪದಕ್ಕೆ ‘ವಾತಾಯನ’ ಅಥವಾ ‘ಗಾಳಿ ಬೆಳಕಿನ ಕಿಂಡಿ’ ಎಂಬರ್ಥವಿದೆ. ಇದನ್ನು ‘ಜಾಲಂಧ್ರ’ ಎಂದೂ ಸಹ ಕರೆಯಬಹುದು. ದೇವಾಲಯಗಳಲ್ಲಿ ಗವಾಕ್ಷಿಗಳನ್ನು ಸಾಂಕೇತಿಕವಾಗಿ ಗರ್ಭಗುಡಿಯಲ್ಲಿರುವ ಕೇಂದ್ರ ವಿಗ್ರಹಕ್ಕೆ ಗಾಳಿ ಮತ್ತು ಬೆಳಕನ್ನು ಸೂಸುವುದಕ್ಕಾಗಿ ನಿರ್ಮಿಸುತ್ತಾರೆ. ಪರ್ಯಾಯವಾಗಿ, ಗರ್ಭಗುಡಿಯಲ್ಲಿರುವ ದೇವರು ಜಗತ್ತನ್ನು ನೋಡಲು ಕಿಟಕಿ ಅಥವಾ ಗವಾಕ್ಷಿಯನ್ನು ಒದಗಿಸುತ್ತಾರೆ ಎಂದೂ ಕೂಡ ವ್ಯಾಖ್ಯಾನಿಸಲಾಗಿದೆ. ಡಗ್ಲಾಸ್ ಬ್ಯಾರಟ್ ರವರು ಬರೆದಿರುವ ಹೇಮಾವತಿ ಎಂಬ ಪುಸ್ತಕದಲ್ಲಿ ಗವಾಕ್ಷಿಗಳ ಕೆತ್ತನೆ ನೊಳಂಬರ ಕಾಲದ ವಾಸ್ತು ಶಿಲ್ಪದ ವೈಶಿಷ್ಟ್ಯವೆಂಬ ಉಲ್ಲೇಖವಿರುವುದರಿಂದ ಭೋಗ ನಂದೀಶ್ವರ ದೇವಾಲಯದ ಗವಾಕ್ಷಿಗಳ ನಿರ್ಮಾಣವೂ ಸಹ ನೊಳಂಬರ ಕಾಲದಲ್ಲೇ ಆಗಿರಬಹುದೆಂದು ವಿಶ್ಲೇಶಿಸಬಹುದು. ಈ ಲೇಖನದ ಮೂಲಕ ಭೋಗ ನಂದೀಶ್ವರ ದೇವಾಲಯದ ಸಮುಚ್ಚಯದಲ್ಲಿ ಕೆತ್ತಲಾಗಿರುವ ಗವಾಕ್ಷಿಗಳ ಬಗ್ಗೆ ಒಂದು ಕಿರುನೋಟ ಬೀರುವ ಪ್ರಯತ್ನ ಮಾಡಿದ್ದೇನೆ.

ನಟರಾಜನ ಗವಾಕ್ಷಿ

ವರುಣನ ಗವಾಕ್ಷಿ

ಅರುಣಾಚಲೇಶ್ವರ, ಉಮಾ ಮಹೇಶ್ವರ ಹಾಗೂ ಭೋಗ ನಂದೀಶ್ವರ ದೇಗುಲಗಳಿಗೆ ಹೊಂದಿಕೊಂಡಂತೆ ಒಟ್ಟು ಹತ್ತು ಗವಾಕ್ಷಿಗಳನ್ನು ನಿರ್ಮಿಸಲಾಗಿದೆ. ವಿಶೇಷ ಮುತುವರ್ಜಿಯನ್ನು ವಹಿಸಿ ಕೆತ್ತಲಾಗಿರುವ ಈ ಗವಾಕ್ಷಿಗಳು ನೋಡುಗರ ಕಣ್ಣಿಗೆ ಸುಂದರ ಶಿಲ್ಪಗಳಾಗಿ ಕಂಡರೂ ಇದರ ಮೂಲ ಉದ್ದೇಶ ಗರ್ಭಗುಡಿಯಲ್ಲಿರುವ ಕೇಂದ್ರ ವಿಗ್ರಹಕ್ಕೆ ಬೆಳಕನ್ನು ಒದಗಿಸುವುದು ಎಂಬುದು ಸೂಕ್ಷ್ಮವಾಗಿ ಗಮನಿಸಿದರಷ್ಟೇ ಅರ್ಥವಾಗುವ ಸಂಗತಿ. ಇಲ್ಲಿ ನಟರಾಜನ ಭಂಗಿ, ಮುದ್ದಾದ ಕುಬ್ಜ ಗಣಗಳು, ಬ್ರಹ್ಮ, ವರುಣ ಮತ್ತು ದುರ್ಗಿಯ ಕೆತ್ತನೆಗಳನ್ನು ಗವಾಕ್ಷಿಯ ರೂಪದಲ್ಲಿ ಕಾಣಬಹುದು. ಇಲ್ಲಿರುವ ಪ್ರತಿಯೊಂದು ಗವಾಕ್ಷಿಗಳ ಚಿತ್ರಣ ಹಾಗೂ ಅದರ ವಿವರಣೆಯನ್ನು ಮುಂದಿನ ಕೆಲವು ಸಾಲುಗಳಲ್ಲಿ ಪ್ರಸ್ತುತ ಪಡಿಸಿದ್ದೇನೆ.
ಅರುಣಾಚಲೇಶ್ವರ ಗುಡಿಯ ಬಲಭಾಗದಲ್ಲಿ ದಕ್ಷಿಣಾಭಿಮುಖವಾಗಿ ನಟರಾಜನ ಶಿಲ್ಪವಿರುವ ಗವಾಕ್ಷಿಯಿದೆ. ಸಾಮಾನ್ಯವಾಗಿ ನಟರಾಜನನ್ನು ಬಲಗೈ ಅಭಯ ಹಸ್ತ ಮತ್ತು ಎಡಗೈ ಗಜ ಹಸ್ತದಲ್ಲಿರುವ ಭಂಗಿಯಲ್ಲಿ ಕಾಣುತ್ತೇವೆ. ಆದರೆ ಈ ಕೆತ್ತನೆಯಲ್ಲಿ ಇದು ವಿರುದ್ಧವಾಗಿದೆ ಅಂದರೆ ಎಡಗೈ ಅಭಯ ಹಸ್ತ ಹಾಗೂ ಬಲಗೈ ಗಜ ಹಸ್ತದಲ್ಲಿದೆ. ನೊಳಂಬರ ಶೈಲಿಯ ವಾಸ್ತುಶಿಲ್ಪಗಳ ಬಗ್ಗೆ ಸಂಶೋಧನಾ ಬರಹವನ್ನು ಮಂಡಿಸಿರುವ ಆಂಡ್ರೂ ಕೊಹೆನ್ ರವರ ಲೇಖನವೊಂದರಲ್ಲಿ   ಈ ಕೆತ್ತನೆಯಲ್ಲಿರುವ ನಟರಾಜನನ್ನು ‘ನಟೇಶ’ ಎಂದು ಸಂಬೋಧಿಸಿದ್ದಾರೆ. ನಟರಾಜನಿಗೆ ಒಟ್ಟು  ಎಂಟು ಕೈಗಳಿದ್ದು, ಬಲಭುಜದ ಮೂರು ಹಸ್ತಗಳಲ್ಲಿ ಮೇಲಿಂದ ಕೆಳಗೆ ಕ್ರಮವಾಗಿ ಸೃಷ್ಟಿಯ ಮೊದಲ ಧ್ವನಿಯನ್ನು ಉಂಟುಮಾಡಿದ ‘ಡಮರು’, ‘ತ್ರಿಶೂಲ’ ಹಾಗೂ ‘ಖರತಾಲ್’ ಎಂಬ ವಾದ್ಯಗಳಿದ್ದರೆ ಎಡಭುಜದ ಮೂರು ಹಸ್ತಗಳಲ್ಲಿ ಮೇಲಿಂದ ಕೆಳಗೆ ಕ್ರಮವಾಗಿ ವಿನಾಶದ ಶಕ್ತಿಯನ್ನು ಸೂಚಿಸುವ ‘ಅಗ್ನಿ’, ‘ಗಂಟೆ’ ಹಾಗೂ ‘ಕಪಾಲ’ಗಳಿವೆ. ಮೇಲ್ನೋಟಕ್ಕೆ ಇದು ನೃತ್ಯ ಶಿಲ್ಪದಂತೆ ಕಂಡರೂ ಸೂಕ್ಷ್ಮವಾಗಿ ಗಮನಿಸಿದಾಗ ನಟರಾಜನು ತನ್ನ ಪಾದಗಳನ್ನು ಕೆಳಗಿಳಿಸಿ ಅಪಸ್ಮಾರನ ಮೇಲೆ ನಿಂತಿರುವುದರಿಂದ ಇದು ನಿಶ್ಚಲ ಭಂಗಿಯಂತೆ ತೋರುತ್ತದೆ. ಸಂಗೀತ ವಾದ್ಯವನ್ನು ಹೊಂದಿರುವ ಪುರುಷ ಆಕೃತಿಗಳು  ಶಿವನ ಬಲ ಮತ್ತು ಎಡಪಾದದ ಬಳಿಯಲ್ಲಿ ಕಾಣಬಹುದು.ಈ ಗವಾಕ್ಷಿಯ ಮೇಲ್ಭಾಗದಲ್ಲಿ ಕೋರೆಹಲ್ಲು ಹಾಗೂ ನಾಲಿಗೆಯನ್ನು ಚಾಚಿದ ಕೀರ್ತಿಮುಖನೆಂಬ ರಕ್ಕಸನ ಮುಖವಿದ್ದು ಇಬ್ಬದಿಯ ಯಾಳಿಗಳ ಮೇಲೆ ಗಜಮುಖ ಹಾಗೂ ಮಕರಗಳನ್ನು ಕಾಣಬಹುದು.

ಉಮಾಮಹೇಶ್ವರನ ಹಿಂದಿರುವ ಗವಾಕ್ಷಿಗಳು

ನೃತ್ಯ ಶಿಲ್ಪವಿರುವ ಗವಾಕ್ಷಿ

ಷಣ್ಮುಖನ ಶಿಲ್ಪವುಳ್ಳ ಗವಾಕ್ಷಿ

ಉಮಾಮಹೇಶ್ವರ ದೇವಾಲಯದ ಹಿಂಭಾಗದಲ್ಲಿ ಪಶ್ಚಿಮಾಭಿಮುಖವಾಗಿರುವ ಗವಾಕ್ಷಿಯಲ್ಲಿರುವುದು ವರುಣದೇವ. ವರುಣದೇವನು ತನ್ನ ವಾಹನವಾದ ಮಕರದ ಮೇಲೆ ನಿಂತು ತನ್ನ ಆಯುಧವಾದ ಪಾಶವನ್ನು ಹಿಡಿದಿರುವುದನ್ನು ಈ ಕೆತ್ತನೆಯಲ್ಲಿ ನೋಡಬಹುದು. ಬಹಳ ನೈಜವಾಗಿ ಮೂಡಿಬಂದಿರುವ ವರುಣನ ಕಿರೀಟ, ವಂಕಿ, ಕೊರಳಿನ ಹಾರದ ಕೆತ್ತನೆಗಳು ಶಿಲ್ಪಿಯ ಕೈ ಚಳಕಕ್ಕೆ ಸಾಕ್ಷಿಯಾಗಿವೆ. ಈ ಶಿಲ್ಪದ ಪ್ರತಿರೂಪದಂತಿರುವ ಇನ್ನೊಂದು ಗವಾಕ್ಷಿಯನ್ನು ಇದೇ ಭಿತ್ತಿಯಲ್ಲಿ ನಾವು ಕಾಣಬಹುದು.
ಉಮಾ ಮಹೇಶ್ವರ ದೇವಾಲಯದ ಒಳಭಾಗದಲ್ಲಿ ಗರ್ಭಗುಡಿಯ ಎರಡೂ ಬದಿಯಲ್ಲಿ ನೃತ್ಯ ಶಿಲ್ಪ ಗವಾಕ್ಷಿಗಳಿವೆ. ದೇವಾಲಯದ ಹಿಂಭಾಗದಲ್ಲಿರುವ ವರುಣನ ಅವಳಿ ಶಿಲ್ಪಗಳಂತೆ ಈ ನೃತ್ಯ ಶಿಲ್ಪಗಳು ಸಹ ಒಂದೇ ರೀತಿಯಲ್ಲಿ ಕೆತ್ತಲ್ಪಟ್ಟಿವೆ. ಈ ನೃತ್ಯ ಶಿಲ್ಪದಲ್ಲಿ ಮೂರು ಸ್ತ್ರೀ ಪುರುಷ  ಜೋಡಿಗಳಿದ್ದು ಪುರುಷರು ವಾದ್ಯ ಹಿಡಿದಿರುವಂತೆ ಹಾಗೂ  ಸ್ತ್ರೀಯರು ನರ್ತಿಸುತ್ತಿರುವಂತೆ ಬಿಂಬಿಸಲಾಗಿದೆ. ಉಮಾಮಹೇಶ್ವರನ  ಬಲಭಾಗದಲ್ಲಿರುವ ನೃತ್ಯಶಿಲ್ಪಕ್ಕೆ ಚಿತ್ರಪಟದಂತಿರುವ ಯಾಳಿ ಹಾಗೂ ಕೀರ್ತಿಮುಖವು ಬಹಳ ಆಕರ್ಷಣೀಯವಾಗಿದೆ.
ಷಣ್ಮುಖನ ಶಿಲ್ಪವಿರುವ ಗವಾಕ್ಷಿಯೊಂದು ಅರುಣಾಚಲೇಶ್ವರ ಗುಡಿಯ ಬಲಭಾಗದಲ್ಲಿ ಉತ್ತರಾಭಿಮುಖವಾಗಿದೆ.ಮೇಲ್ನೋಟಕ್ಕೆ ಇದು ಬ್ರಹ್ಮನ ಮೂರ್ತಿಯಂತೆ ಕಂಡರೂ ವಾಹನವಾಗಿ ನವಿಲಿನ ಕೆತ್ತನೆಯಿರುವುದರಿಂದ ಇದನ್ನು ಷಣ್ಮುಖ ಎಂದು ಪರಿಗಣಿಸಬಹುದು. ಷಣ್ಮುಖನ ಹಲವು ಕೆತ್ತನೆಗಳಲ್ಲಿ ಮೂರು ಮುಖಗಳು ಮುಂಭಾಗದಲ್ಲಿದ್ದರೆ ಉಳಿದ ಮುಖಗಳು ಹಿಂಭಾಗದಲ್ಲಿದ್ದು ಕಣ್ಣಿಗೆ ಗೋಚರಿಸುವುದಿಲ್ಲ. ಇಲ್ಲಿಯೂ ಕೂಡ ಹಾಗೆಯೇ ಇರಬಹುದೆಂದು ಭಾವಿಸಬಹುದು’ ಶಿಲ್ಪಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿರುವ ಗುಲ್ಬರ್ಗಾ ಮೂಲದ ಗಾಯತ್ರಿ ಶಿಲ್ಪಿಯವರು ಸಹ ಇದು ಷಣ್ಮುಗನೆಂದೇ ಧೃಡಪಡಿದ್ದಾರೆ. ಗವಾಕ್ಷಿಯ ಸುತ್ತಲೂ ಆಕರ್ಷಣೀಯವಾದ ರಂಗೋಲಿ ಮಾದರಿಯ ಕಲಾತ್ಮಕ ವಿನ್ಯಾಸವಿದೆ.

ವಿಷ್ಣುದುರ್ಗಿಯ ಗವಾಕ್ಷಿ

ಅರುಣಾಚಲೇಶ್ವರ ಗುಡಿಯ ಕುಬ್ಜ ಗಣಗಳ ಗವಾಕ್ಷಿ

ಭೋಗನಂದೀಶ್ವರಗುಡಿಯ ಗಣಗಳ ನೃತ್ಯಶಿಲ್ಪ ಗವಾಕ್ಷಿ

ಭೋಗನಂದೀಶ್ವರ ದೇವಾಲಯದ ಬಲಭಿತ್ತಿಯಲ್ಲಿ ವಿಷ್ಣು ದುರ್ಗಿಯ ಗವಾಕ್ಷಿಯಿದೆ. ವಿಶೇಷವೆಂದರೆ ಇಲ್ಲಿ ದುರ್ಗಿಯು ರುದ್ರ ಸ್ವರೂಪಿಯಾಗಿರದೆ ಹಸನ್ಮುಖಿಯಾಗಿ ಮಹಿಷನ ಮೇಲೆ ನಿಂತಿರುವ ಭಂಗಿಯನ್ನು ಕಾಣಬಹುದು.  ವಿಷ್ಣು ದುರ್ಗಿಯು ನೊಳಂಬರ ಕಾಲದ ಕ್ಷೇತ್ತ್ರ ದೇವತೆಯಾಗಿದ್ದು ಅನಾದಿ ಕಾಲದಿಂದಲೂ ಆಕೆಗೆ ವಿಶೇಷ ಪೂಜೆ ಸಲ್ಲುತ್ತಾ ಬಂದಿದೆ. ಈ ಗವಾಕ್ಷಿಯ ಹಿಂಭಾಗದಲ್ಲಿ ಅಂದರೆ  ಗರ್ಭಗುಡಿಯ ಒಳಗೆ ವಿಷ್ಣುವಿನ ವಿಗ್ರಹವಿದೆ. ದುರ್ಗಿಯು ದೇವಾಲಯದ ಹೊರ ಆವರಣದಲ್ಲಿದ್ದರೂ ಇಂದಿಗೂ ಸಹ ನಿರಂತರವಾಗಿ ಪೂಜೆ ಸಲ್ಲುತ್ತಿದೆ ಎಂಬುದು ವಿಶೇಷ.
ದೇವಾಲಯದ ಆವರಣದಲ್ಲಿರುವ ಉಳಿದ ಮೂರು ಗವಾಕ್ಷಿಗಳಲ್ಲಿ ಕುಬ್ಜ ಗಣಗಳನ್ನು ಕಾಣಬಹುದು. ಇವುಗಳನ್ನು ಅರುಣಾಚಲೇಶ್ವರ ದೇವಾಲಯದ ಬಲಪಾರ್ಶ್ವದಲ್ಲಿ ಹಾಗೂ ಭೋಗ ನಂದೀಶ್ವರನ ಬಲ ಹಾಗೂ ಎಡ ಭಿತ್ತಿಗಳಲ್ಲಿ ಕೆತ್ತಲಾಗಿದೆ. ಹಾಸ್ಯದ ಅಂಶವನ್ನು ಒಳಗೊಂಡ ಈ ಕೆತ್ತನೆಗಳು ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತವೆ. ಶಿವನ ಸೇವಕರು, ಆಪ್ತರೂ ಹಾಗೂ ಹಿಂಬಾಲಕರಾದ ಗಣಗಳಿಗೆ ಎಲುಬುಗಳಿಲ್ಲದ ಕಾರಣ ಯಾವುದೇ ಸ್ವರೂಪವನ್ನು ಪಡೆಯಬಲ್ಲರು ಎನ್ನಲಾಗಿದೆ. ಹಾಗೆಯೇ ಇಲ್ಲಿಯೂ ಸಹ ಪ್ರತಿಯೊಂದು ಗಣವು ಬೇರೆ ಬೇರೆ ಭಂಗಿಯಲ್ಲಿವೆ. ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ಪುರಾತನ ದೇವಾಲಯಗಳಲ್ಲಿನ ವಾಸ್ತುಶಿಲ್ಪಗಳು ಕೇವಲ ಧಾರ್ಮಿಕ ಮೌಲ್ಯಗಳನ್ನು ಸಾರುವುದಕ್ಕಷ್ಟೇ ಸೀಮಿತವಾಗದೆ ವೈಜ್ಞಾನಿಕ ಚಿಂತನೆಗಳನ್ನೂ ಸಹ ಒಳಗೊಂಡಿದ್ದವು ಎಂಬುದಕ್ಕೆ ಭೋಗನಂದೀಶ್ವರ ದೇವಾಲಯದ ಗವಾಕ್ಷಿಗಳ ಕೆತ್ತನೆಯೇ ಒಂದು ಉತ್ತಮ ನಿದರ್ಶನ. ಇಂತಹ ಭವ್ಯ ಪರಂಪರೆಗೆ ನಾಂದಿ ಹಾಡಿದ ರಾಜ ವಂಶದವರಿಗೆ ಹಾಗು ಕಲಾತ್ಮಕವಾದ ಶಿಲ್ಪಗಳನ್ನು ನಿರ್ಮಿಸಿದ ಶಿಲ್ಪಿಗಳಿಗೆ ನನ್ನ ಅನಂತಾನಂತ ವಂದನೆಗಳು.

ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ  ದಿವ್ಯಾ ಪ್ರಸಾದ್, ಹಲವು ವರ್ಷಗಳ ಕಾಲ ಶ್ರೀಮತಿ ಸಂಧ್ಯಾ ಕೇಶವರಾವ್ ಅವರಲ್ಲಿ ನೃತ್ಯಾಭ್ಯಾಸವನ್ನು ಮಾಡಿ, ನಂತರ ಗುರು ಕರ್ನಾಟಕ ಕಲಾಶ್ರೀ ಬಿ. ಭಾನುಮತಿ  ಹಾಗೂ ಶ್ರೀಮತಿ ಶೀಲಾ ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿಯನ್ನು ಮುಂದುವರೆಸಿದ್ದಾರೆ. ಭರತನಾಟ್ಯದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ವಿದ್ವತ್ ಪದವಿ ಹಾಗು ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದಿರುವ ಇವರು, 2 0 0 8 ರಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಪೂರೈಸಿ, ದೇಶ ವಿದೇಶಗಳಲ್ಲಿ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.ಇಂಜಿನಿಯರಿಂಗ್  ಪದವಿಯನ್ನು ಗಳಿಸಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಹಲವು ವರ್ಷಗಳ ಹಿಂದೆ ತಮ್ಮ ವೃತ್ತಿಯನ್ನು ತ್ಯಜಿಸಿ “ಕಲಾಬಿಂದು“ ಎಂಬ ನಾಟ್ಯ ಶಾಲೆಯನ್ನು ಸ್ಥಾಪಿಸಿ, ಹಲವಾರು ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿಯನ್ನು ನೀಡುತ್ತಾ ಕಲಾಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ನೂಪುರ ಭ್ರಮರಿ ಸಂಸ್ಥೆಯ ‘ನೃತ್ಯಶಿಲ್ಪಯಾತ್ರೆ’ ಅಧ್ಯಯನದ ತರಬೇತಿಯನ್ನು (ಇಂಟರ್ನ್ ಶಿಪ್) ಪಡೆಯುತ್ತಿದ್ದಾರೆ.

**********

Recent Posts